ಸತತ ಗೆಲುವಿನೊಂದಿಗೆ ಅಬ್ಬರಿಸಿರುವ ಟೀಮ್ ಇಂಡಿಯಾವನ್ನು ವಿಶ್ವಕಪ್‌ನಲ್ಲಿ ಫೈನಲ್ ಪಂದ್ಯದವರೆಗೂ ಯಾವ ತಂಡಕ್ಕೂ ಸೋಲಿಸಲು ಸಾಧ್ಯವಾಗಲೇ ಇಲ್ಲ. ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಮತ್ತೊಮ್ಮೆ ತೊಡೆ ತಟ್ಟಲು ಸಜ್ಜಾಗಿದೆ ಆಸ್ಟ್ರೇಲಿಯಾ. ಲೀಗ್ ಹಂತದ ಆರಂಭಿಕ ಪಂದ್ಯದಲ್ಲಿ ಭಾರತಕ್ಕೆ ಶರಣಾಗಿದ್ದ ಆಸಿಸ್ ತಂಡ ಫೈನಲ್ ಪಂದ್ಯದಲ್ಲಿ ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.
ಈ ಮಹತ್ವದ ಪಂದ್ಯಕ್ಕೆ ಎರಡು ತಂಡಗಳು ಕೂಡ ತಮ್ಮ ಬಲಿಷ್ಠ ಆಡುವ ಬಳಗದೊಂದಿಗೆ ಕಣಕ್ಕಿಳಿಯುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಟೀಮ್ ಇಂಡಿಯಾ ಕಳೆದ ಹಲವು ಪಂದ್ಯಗಳಿಂದ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾದ ಬಳಿಕ ಸೂರ್ಕುಮಾರ್ ಯಾದವ್ ಹಾರ್ದಿಕ್ ಪಾಂಡ್ಯ ಸ್ಥಾನದಲ್ಲಿ ಹಾಗೂ ಶಾರ್ದುಲ್ ಠಾಕೂರ್ ಸ್ಥಾನದಲ್ಲಿ ಮೊಹಮ್ಮದ್ ಶಮಿ ಅವಕಾಶ ಪಡೆದ ಬಳಿಕ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಈ ತಂಡ ಅದ್ಭುತವಾದ ಪ್ರದರ್ಶನ ನೀಡುತ್ತಿರುವ ಕಾರಣದಿಂದಾಗಿ ತಂಡದಲ್ಲಿ ಬದಲಾವಣೆ ಮಾಡಬೇಕಾದ ಸಂದರ್ಭವೇ ಒದಗಿ ಬಂದಿಲ್ಲ.

ಇಂಥಾ ಸಂದರ್ಭದಲ್ಲಿ ಟೀಮ್ ಇಂಡಿಯಾ ಫೈನಲ್ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳುವುದನ್ನು ನಿರೀಕ್ಷಿಸುವುದು ಕಷ್ಟ. ಭಾರತದ ಮಾಜಿ ಕ್ರಿಕೆಟಿಗ, 1983ರ ವಿಶ್ವಕಪ್ ವಿಜೇತ ತಂಡದ ಆಟಗಾರ ಮದನ್‌ಲಾಲ್ ಕುತೂಹಲಕಾರಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಅನುಭವಿ ಆಟಗಾರ ಆರ್ ಅಶ್ವಿನ್‌ಗೆ ಅವಕಾಶ ನೀಡುವ ಸಾಧ್ಯತೆ ಬಹಳ ಕಡಿಮೆಯಿದೆ ಎಂದಿದ್ದಾರೆ ಮದನ್ ಲಾಲ್.
ಈ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಯಾವೆಲ್ಲಾ ಆಟಗಾರರನ್ನು ಒಳಗೊಂಡ ಆಡುವ ಬಳಗದೊಂದಿಗೆ ಕಣಕ್ಕಿಳಿಯಬೇಕು ಎನ್ನುವ ಚರ್ಚೆ ಈಗ ಜೋರಾಗಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಬಳಿಕ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಗೆಲುವಿನ ಕಾಂಬಿನೇಶನ್‌ನೊಂದಿಗೆ ತಂಡ ಕಣಕ್ಕಿಳಿಸುತ್ತಿದ್ದಾರೆ ತಂಡದ ಕೋಚ್ ದ್ರಾವಿಡ್. ಆದರೆ ಫೈನಲ್ ಪಂದ್ಯ ನಡೆಯುವ ಅಹ್ಮದಾಬಾದ್‌ನ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡುವಂತಿದ್ದರೆ ಒಂದು ಬದಲಾವಣೆಗೆ ಅವಕಾಶವಿದ್ದೇ ಇದೆ. ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಮದನ್ ಲಾಲ್.
ಈ ವಿಶ್ವಕಪ್‌ನಲ್ಲಿ ಭಾರತದ ಮೊದಲ ಪಂದ್ಯ ಆಸ್ಟ್ರೇಲಿಯಾ ತಂಡದ ವಿರುದ್ಧವೇ ನಡೆದಿತ್ತು. ಈ ಪಂದ್ಯ ಸ್ಪಿನ್ನರ್‌ಗಳಿಗೆ ನೆರವು ನೀಡುವ ಚೆನ್ನೈನಲ್ಲಿ ಆಯೋಜನೆಯಾಗಿತ್ತು. ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಮೂರನೃ ಬೌಲರ್ ಆಗಿ ಆರ್ ಆಶ್ವಿನ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರು. ಈ ಪಂದ್ಯದಲ್ಲಿ 10 ಓವರ್‌ಗಳ ಬೌಲಿಂಗ್ ದಾಳಿ ನಡೆಸಿದ್ದ ಆರ್ ಅಶ್ವಿನ್ ಒಂದು ಮೇಡನ್ ಓವರ್ ಸಹಿತ 34 ರನ್‌ಗಳನ್ನು ನೀಡಿ ಒಂದು ವಿಕೆಟ್ ಕಬಳಿಸಿದ್ದರು.
ಈ ವಿಚಾರವಾಗಿ ಮದನ್‌ಲಾಲ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. "ಆರ್ ಅಶ್ವಿನ್ ಅವರ ಆಯ್ಕೆ ಪಿಚ್‌ನ ಪರಿಸ್ಥಿತಿಗೆ ಅನುಗುಣವಾಗಿ ನಡೆಯಲಿದೆ. ಆದರೆ ಭಾರತ ತಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ವಿನ್ನಿಂಗ್ ಕಾಂಬಿನೇಶನ್ ಬಿಟ್ಟು ಬದಲಾವಣೆ ಮಾಡಿಕೊಳ್ಳಲಿದೆ ಎಂದು ನನಗೆ ಅನಿಸುತ್ತಿಲ್ಲ" ಎಂದಿದ್ದಾರೆ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಮದನ್ ಲಾಲ್.
"ಆಸ್ಟ್ರೇಲಿಯಾ ತಬ್ರೈಸ್ ಶಂಸಿ ವಿರುದ್ಧ ಯಾವ ಸಂದರ್ಭದಲ್ಲಿಯೂ ಸುಲಲಿತವಾಗಿ ಬ್ಯಾಟಿಂಗ್ ನಡೆಸಲು ಸಾಧ್ಯವಗಲಿಲ್ಲ. ಕುಲ್‌ದೀಪ್ ಯಾದವ್ ಅವರನ್ನು ಎದುರಿಸುವುದು ಕೂಡ ಅವರಿಗೆ ಬಹಳ ಕಠಿಣವಾಗಿರಲಿದೆ. ಅಹ್ಮದಾಬಾದ್‌ನಲ್ಲಿಬ್ಯಾಟಿಂಗ್ ನಡೆಸಲು ಉತ್ತಮವಾದ ಪಿಚ್ ದೊರೆಯಬಹುದು ಎನ್ನುವ ನಿರೀಕ್ಷೆ ನನ್ನದು" ಎಂದಿದ್ದಾರೆ ಭಾರತದ ಮಾಜಿ ಕ್ರಿಕೆಟಿಗ ಮದನ್ ಲಾಲ್.