Maharaja Trophy: ಮಂಗಳೂರು ವಿರುದ್ಧ ಶಿವಮೊಗ್ಗಕ್ಕೆ 7 ವಿಕೆಟ್ ಭರ್ಜರಿ ಜಯ
ಹುಬ್ಬಳ್ಳಿ: ನಾಯಕ ಸ್ಮರಣ್ ರವಿಚಂದ್ರನ್ ಹಾಗೂ ಅನೀಶ್ ಕೆವಿ ಅವರು ಬಾರಿಸಿದ ಅರ್ಧಶತಕದ ನೆರವಿನಿಂದ ಶಿವಮೊಗ್ಗ ಯೋಧಾಸ್ ತಂಡ 7 ವಿಕೆಟ್‌ಗಳಿಂದ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಗೆಲುವಿನ ಮೂಲಕ ಶಿವಮೊಗ್ಗ ಯೋಧಾಸ್ ತಂಡ ಆಡಿದ 8 ಪಂದ್ಯಗಳಲ್ಲಿ 4 ಜಯ, 4 ಸೋಲು ಕಂಡಿದ್ದು, 8 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮಂಗಳೂರು ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ಆದರ್ಶ್ ಎಸ್‌ಜಿ, ನಿಕಿನ್ ಜೋಸ್ ಮೊದಲ ವಿಕೆಟ್‌ಗೆ 5.1 ಓವರ್‌ಗಳಲ್ಲಿ 35 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ಹಂತದಲ್ಲಿ 2 ಬೌಂಡರಿ, 2 ಸಿಕ್ಸರ್ ನೆರವಿನಿಂದ 24 ರನ್ ಬಾರಿಸಿದ್ದ ಆದರ್ಶ್ ಎಸ್‌ಜಿ ಔಟ್ ಆದರು.

ಸ್ಟಾರ್ ಆಟಗಾರರಾದ ಕರುಣ್ ನಾಯರ್, ಶ್ರೇಯಸ್ ಅಯ್ಯರ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕ ಆಟಗಾರ ನಿಕಿನ್ ಜೋಸ್ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 51 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಕೆಳ ಕ್ರಮಾಂಕದಲ್ಲಿ ಸೂರಜ್ ಆಹುಜಾ (39) ಹಾಗೂ ಕೋದಂಡ ಅಜಿತ್ ಕಾರ್ತಿಕ್ (36) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಶಿವಮೊಗ್ಗ ತಂಡದ ಪರ ಶ್ರೀಶ ಆಚಾರ್, ಧನುಷ್ ಗೌಡ ಹಾಗೂ ಅಭಿಲಾಷ್ ಶೆಟ್ಟಿ ತಲಾ 2 ವಿಕೆಟ್ ಉರುಳಿಸಿದರು.
ಅನೀಶ್, ಸ್ಮರಣ್ ಅರ್ಧಶತಕ
ಗುರಿಯನ್ನು ಬೆನ್ನಟ್ಟಿದ ಶಿವಮೊಗ್ಗ ಯೋಧಾಸ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಲುವ್ನಿತ್ ಸಿಸೋಡಿಯಾ (5) ಮತ್ತು ತುಷಾರ್ ಸಿಂಗ್ (7) ದೊಡ್ಡ ಜೊತೆಯಾಟದ ಕಾಣಿಕೆ ನೀಡುವಲ್ಲಿ ವಿಫಲರಾದರು. ಮೂರನೇ ಕ್ರಮಾಂಕದಲ್ಲಿ ನವೀನ್ ಎಂಜಿ 20 ರನ್ ಬಾರಿಸಿ ಔಟ್ ಆದರು. 40 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅನೀಶ್ ಕೆವಿ ಹಾಗೂ ಸ್ಮರಣ್ ರವಿಚಂದ್ರನ್ ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ 75 ಎಸೆತಗಳಲ್ಲಿ 125 ರನ್ ಬಾರಿಸಿತು. ಅನೀಶ್ ಕೆವಿ 8 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 76 ರನ್ ಸಿಡಿಸಿದರೆ, ಸ್ಮರಣ್ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 53 ರನ್ ಬಾರಿಸಿ ಜಯದಲ್ಲಿ ಮಿಂಚಿದರು.
ಅಭಿನವ್ ಮನೋಹರ್ ಸ್ಫೋಟಕ ಬ್ಯಾಟಿಂಗ್
ಹುಬ್ಬಳ್ಳಿ ಟೈಗರ್ಸ್ ಹಾಗೂ ಮೈಸೂರು ವಾರಿಯರ್ಸ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತು. ಹೀಗಾಗಿ ಓವರ್‌ಗಳಿಗೆ ಕತ್ತರಿ ಸಹ ಬಿದ್ದಿತು. ಮಳೆಯ ಕಾರಣ ಪಂದ್ಯವನ್ನು ತಲಾ 8 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡ ಅಭಿನವ್ ಮನೋಹರ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿತು. ಅಭಿನವ್ ಮನೋಹರ್ ಮೈಸೂರು ಬೌಲರ್‌ಗಳ ಬೆವರಿಳಿಸಿದರು. ಇವರು 2 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ನೆರವಿನಿಂದ 46 ರನ್ ಬಾರಿಸಿ ಮಿಂಚಿದರು. ಮಳೆಯಿಂದಾಗಿ ಎರಡನೇ ಇನಿಂಗ್ಸ್ ಆಡಲು ಸಾಧ್ಯವಾಗದ ಕಾರಣ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು.

ಹುಬ್ಬಳ್ಳಿ ಟೈಗರ್ಸ್ ಈ ಒಂದು ಅಂಕಗಳೊಂದಿಗೆ 7 ಪಂದ್ಯಗಳಲ್ಲಿ 6 ಅಂಕ ಕಲೆ ಹಾಕಿದರೆ, ಮೈಸೂರು ವಾರಿಯರ್ಸ್ 7 ಪಂದ್ಯಗಳಲ್ಲಿ 5 ಅಂಕ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications