Maharaja T20 2024: ಗಮನ ಸೆಳೆದ ಆಟಗಾರರು ಯಾರು? ಐಪಿಎಲ್ ಮಾಲೀಕರ ಚಿತ್ತ ಕದ್ದ ಪ್ಲೇಯರ್ ಪಟ್ಟಿ ಇಲ್ಲಿದೆ
ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ಇತಿಹಾಸದ ಪುಟ ಸೇರಿದೆ. ಫೈನಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ 45 ರನ್‌ಗಳಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಮಹಾರಾಜ ಟ್ರೋಫಿಯ ಮೇಲೆ ಐಪಿಎಲ್ ಮಾಲೀಕರು ಸಹ ಚಿತ್ತ ನೆಟ್ಟಿದ್ದರು. ಮಾಲೀಕರ ಚಿತ್ತವನ್ನು ಕದ್ದ ಪ್ಲೇಯರ್ಸ್ ಪಟ್ಟಿ ಇಲ್ಲಿದೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಮೊದಲು ಬ್ಯಾಟ್ ಮಡಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 207 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 162 ರನ್ ಸೇರಿಸಿ ಸೋಲು ಕಂಡಿದೆ. ಈ ಟೂರ್ನಿಯಲ್ಲಿ ಹಲವು ಸ್ಟಾರ್ ಸ್ಟಾರ್ ಆಟಗಾರರು ಸಹ ಲಯಕ್ಕೆ ಮರಳಿದ್ದಾರೆ.

ಮಾಲೀಕರ ಚಿತ್ತ ಕದ್ದ ಕರುಣ್
ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ನಾಯಕ ಕರುಣ್ ನಾಯರ್ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ತಮ್ಮ ಅಮೋಘ ಪ್ರದರ್ಶನದ ಬಲದಿಂದ ಐಪಿಎಲ್ ಮಾಲೀಕರ ಚಿತ್ತವನ್ನು ಕದ್ದಿದ್ದಾರೆ. ಆಡಿದ 12 ಪಂದ್ಯಗಳಲ್ಲಿ 56ರ ಸರಾಸರಿಯಲ್ಲಿ 560 ರನ್ ಬಾರಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ ಐದು ಅರ್ಧಶತಕ ಸೇರಿವೆ. ಇವರ ಅಮೋಘ ಪ್ರದರ್ಶನ ನಿಜಕ್ಕೂ ಐಪಿಎಲ್ ಮಾಲೀಕರ ಚಿತ್ತ ಕದ್ದಿದೆ.
ಗರಿಷ್ಠ ರನ್ ಬಾರಿಸಿದ 5 ಆಟಗಾರರು
| ಆಟಗಾರ | ತಂಡ | ಪಂದ್ಯ | ರನ್ | 50 | 100 |
| ಕರುಣ್ ನಾಯರ್ | ಮೈಸೂರು | 12 | 560 | 5 | 1 |
| ಅಭಿನವ್ ಮನೋಹರ್ | ಶಿವಮೊಗ್ಗ | 10 | 507 | 6 | 0 |
| ಎಲ್‌ಆರ್ ಚೇತನ್ | ಬೆಂಗಳೂರು | 12 | 429 | 4 | 0 |
| ಎಸ್‌ಯು ಕಾರ್ತಿಕ್ | ಮೈಸೂರು | 12 | 372 | 3 | 0 |
| ಕೆಎಲ್ ಶ್ರೀಜೇತ್ | ಹುಬ್ಬಳ್ಳಿ | 11 | 349 | 2 | 1 |
ಮೂರು ಶತಕಗಳು ದಾಖಲು
ಈ ಬಾರಿಯ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು ಮೂವರು ಆಟಗಾರರು ಶತಕ ಬಾರಿಸಿದ್ದಾರೆ. ಮೈಸೂರು ವಾರಿಯರ್ಸ್ ತಂಡದ ನಾಯಕ ಕರುಣ್ ನಾಯರ್ ಮಂಗಳೂರು ಡ್ರಾಗನ್ಸ್ ವಿರುದ್ಧ ಅಜೇಯ 124 ರನ್ ಸಿಡಿಸಿದ್ದಾರೆ. ಇನ್ನು ಗುಲ್ಬರ್ಗ್ ಮಿಸ್ಟೆಕ್ಸ್ ತಂಡದ ಪರ ಆರ್ ಸ್ಮರಣ್, ಅಜೇಯ 104 ರನ್‌ಗಳ ಇನಿಂಗ್ಸ್‌ನ್ನು ಮೈಸೂರು ವಾರಿಯರ್ಸ್ ವಿರುದ್ಧ ಆಡಿದ್ದಾರೆ. ಹುಬ್ಬಳ್ಳಿ ಟೈಗರ್ಸ್ ಪರ ಕೆ.ಎಲ್ ಶ್ರೀಜೇತ್, ಗುಲ್ಬರ್ಗ ವಿರುದ್ಧ ಅಜೇಯ ಶತಕದ ಸಾಧನೆ ಮಾಡಿದ್ದಾರೆ.

ಅತಿ ಹೆಚ್ಚು ಸಿಕ್ಸರ್ ಬಾರಿಸಿದ್ದು ಯಾರು?
ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿರುವ ಸ್ಟಾರ್ ಆಟಗಾರ ಅಭಿನವ್ ಮನೋಹರ್ ಅವರು ಪ್ರಸಕ್ತ ಮಹಾರಾಜ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ್ದಾರೆ. ಇವರು ಆಡಿದ 10 ಪಂದ್ಯಗಳಲ್ಲಿ 62 ಸಿಕ್ಸರ್ ಸಾಧನೆ ಮಾಡಿದ್ದಾರೆ. ಇವರನ್ನು ಕೊಳ್ಳಲು ಸಹ ಐಪಿಎಲ್ ಮಾಲೀಕರು ಬಾಜಿ ಕಟ್ಟಲಿದ್ದಾರೆ.
ಎಲ್ ಆರ್ ಕುಮಾರ್ ಗರಿಷ್ಠ ವಿಕೆಟ್
ದೇಶೀಯ ಬೌಲರ್ ಹುಡುಕಾಟದಲ್ಲಿರುವ ಐಪಿಎಲ್ ತಂಡಗಳಿಗೆ ಎಲ್‌ಆರ್ ಕುಮಾರ್ ಬೆಸ್ಟ್ ಚಾಯ್ಸ್. ಇವರು ಆಡಿದ 9 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದಾರೆ. ಈ ವೇಳೆ ಇವರ ಎಕನಾಮಿ 9.15 ಆಗಿದ್ದು, ಒಂದೇ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಬೆಂಗಳೂರು ತಂಡದ ಎಲ್ ಕುಶಾಲ್ ಹಾಗೂ ಗುಲ್ಬರ್ಗ ತಂಡದ ಎ ಪ್ರಭಾಕರ ಒಂದೇ ಪಂದ್ಯದಲ್ಲಿ ಐದು ವಿಕೆಟ್ ಪಡೆದು ಬೀಗಿದ್ದಾರೆ.

ಗರಿಷ್ಠ ವಿಕೆಟ್ ಪಡೆದ ಐವರು ಬೌಲರ್ಸ್
| ಆಟಗಾರ | ತಂಡ | ಪಂದ್ಯ | ವಿಕೆಟ್ |
| ಎಲ್‌ಆರ್ ಕುಮಾರ್ | ಹುಬ್ಬಳ್ಳಿ | 9 | 17 |
| ವಿದ್ಯಾಧರ್ ಪಾಟೀಲ್ | ಮೈಸೂರು | 10 | 16 |
| ಎಲ್ ಕುಶಾಲ್ | ಬೆಂಗಳೂರು | 11 | 16 |
| ಸಿಎ ಕಾರ್ತಿಕ್ | ಮೈಸೂರು | 11 | 16 |
| ಎಲ್ ಮನವಂತ್ ಕುಮಾರ್ | ಹುಬ್ಬಳ್ಳಿ | 10 | 15 |
ಮನೋಜ್ ಭಂಡಗೆ ಮೇಲೆ ಚಿತ್ತ
ಆರ್‌ಸಿಬಿ ತಂಡದಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕದ ಮನೋಜ್ ಭಂಡಗೆ ಪ್ರಸಕ್ತ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇವರು 213. 13 ಸ್ಟ್ರೈಕ್ ರೇಟ್‌ನೊಂದಿಗೆ ರನ್ ಗಳಿಸಿದ್ದಾರೆ. ಇವರ ಬಳಿಕ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಅಭಿನವ್ ಮನೋಹರ್ (196.51) ಎರಡನೇ ಸ್ಥಾನದಲ್ಲಿದ್ದರೆ, ಮೊಹಮ್ಮದ್ ತಹಾ (195.95) ಮೂರನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications