ಮೈಸೂರಿನಲ್ಲಿ ನಡೆಯುತ್ತಿರುವ ಮಹರಾಜಾ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ ತಂಡವನ್ನು 39 ರನ್‌ಗಳಿಂದ ಮೈಸೂರು ವಾರಿಯರ್ಸ್ ತಂಡವನ್ನು, ಇನ್ನು ಎರಡನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು 4 ವಿಕೆಟ್‌ಗಳಿಂದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ.
ಭಾನುವಾರ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆದ ಪಂದ್ಯಕ್ಕೆ ಮಳೆ ಕಾಟ ನೀಡಿದ್ದರಿಂದ ಓವರ್‌ಗಳಿಗೆ ಕತ್ತರಿ ಹಾಕಲಾಗಿತ್ತು. ಮೊದಲ ಪಂದ್ಯವನ್ನು 16 ಓವರ್‌ಗಳಿಗೆ ಇಳಿಸಲಾಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಮೊದಲು ಬ್ಯಾಟ್ ಮಾಡಿದ ಮೈಸೂರು ತಂಡದ ಎಸ್‌ಯು ಕಾರ್ತಿಕ್ (13), ಕಾರ್ತಿಕ್ ಸಿಎ (20) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಹರ್ಷಿಲ್ ಧರ್ಮಣಿ (14) ಹಾಗೂ ನಾಯಕ ಮನೀಶ್ ಪಾಂಡೆ (12), ಲಂಕೇಶ್ ಕೆಎಸ್ (15) ರನ್ ಕಲೆ ಹಾಕುವಲ್ಲಿ ವಿಫಲರಾದರು.

ಮಧ್ಯಮ ಕ್ರಮಾಂಕದಲ್ಲಿ ಯಶೋವರ್ಧನ್ ಪ್ರತಾಪ್ 21 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 39 ರನ್ ಸಿಡಿಸಿದರು. ಸುಮಿತ್ ಕುಮಾರ್ ಅಜೇಯ 12 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ಮೈಸೂರು 16 ಓವರ್‌ಗಳಲ್ಲಿ 7 ವಿಕೆಟ್‌ಗೆ 136 ರನ್ ಸಿಡಿಸಿತು. ಬೆಂಗಳೂರು ತಂಡದ ವಿದ್ಯಾಧರ್ ಪಾಟೀಲ್ ಹಾಗೂ ಮೊಹ್ಸಿನ್ ಖಾನ್ ತಲಾ 2 ವಿಕೆಟ್ ಕಬಳಿಸಿದರು.
ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಸ್ಟಾರ್ ಆಟಗಾರರು ರನ್ ಕಲೆ ಹಕುವಲ್ಲಿ ವಿಫಲರಾದರು. ರೋಹನ್ ಪಾಟಿಲ್ (10), ಶುಭಾಂಗ್ ಹೆಗ್ಡೆ (13), ಮಾಧವ್ ಪ್ರಕಾಶ್ (34), ವಿದ್ಯಾಧರ್ ಪಾಟೀಲ್ (ಅಜೇಯ 12) ಮಾತ್ರ ಎರಡಂಕಿ ಮುಟ್ಟಿದರು. ಇನ್ನು ಉಳಿದ ಬ್ಯಾಟರ್‌ಗಳು ಒಂದೇ ಅಂಕಿಯಲ್ಲಿ ಆಟ ಮುಗಿಸಿದರು. ಅಂತಿಮವಾಗಿ ಬೆಂಗಳೂರು 16 ಓವರ್‌ಗಳಲ್ಲಿ 9 ವಿಕೆಟ್‌ಗೆ 97 ರನ್ ಸೇರಿಸಿ ಸೋಲು ಕಂಡಿತು. ಮೈಸೂರು ತಂಡದ ಪರ ಶೀಖರ್ ಶೆಟ್ಟಿ 3, ಕೆ ಗೌತಮ್ 2 ವಿಕೆಟ್ ಪಡೆದರು.

ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡದ ಆರಂಭ ಕಳಪೆಯಾಗಿತ್ತು. ಪ್ರಖರ್ ಚತುರ್ವೇದಿ (8), ಮೊಹಮ್ಮದ್ ತಹಾ (17), ದೇವದತ್ ಪಡಿಕ್ಕಲ್ (7), ವಿಜಯ್ ಬಸವರಾಜ್ (9) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಕೆ ಶ್ರೀಜೀತ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 52, ಶಿವಕುಮಾರ್ ರಕ್ಷಿತ್ 22 ಎಸೆತಗಳಲ್ಲಿ 36 ರನ್ ಸಿಡಿಸಿದರು. ಅಂತಿಮವಾಗಿ ಹುಬ್ಬಳ್ಳಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಗುಲ್ಬರ್ಗ್ ಮಿಸ್ಟೇಕ್ಸ್ ತಂಡದ ಸ್ಮರಣ್ ರವಿಚಂದ್ರನ್ (52) ಪ್ರಜ್ವಲ್ ಪವನ್ (37), ಬೆಂಗಳೂರು ಮೋಹಿತ್ (ಅಜೇಯ 26) ತಂಡಕ್ಕೆ ಆಧಾರವಾದರು. ಅಂತಿಮವಾಗಿ ಗುಲ್ಬರ್ಗ್ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 159 ರನ್ ಸಿಡಿಸಿ ಜಯ ಸಾಧಿಸಿತು.