ಸದ್ಯ ಶ್ರೀಲಂಕಾ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಏಕದಿನ ಸರಣಿಗಳನ್ನು ಆಡುತ್ತಿದೆ. ಉಭಯ ದೇಶಗಳ ನಡುವಿನ ಎರಡನೇ ಏಕದಿನ ಪಂದ್ಯ ಹ್ಯಾಮಿಲ್ಟನ್ ನಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಶ್ರೀಲಂಕಾ 113 ರನ್‌ಗಳಿಂದ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದೆ. ಈ ಪಂದ್ಯದ ಪ್ರದರ್ಶನ ಖಂಡಿತವಾಗಿಯೂ ರಾಜಸ್ಥಾನ ರಾಯಲ್ಸ್ ಅಭಿಮಾನಿಗಳಿಗೆ ದೊಡ್ಡ ಖುಷಿ ನೀಡಿದೆ.
ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 37 ಓವರ್‌ಗಳಲ್ಲಿ 9 ವಿಕೆಟ್‌ಗೆ 255 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಶ್ರೀಲಂಕಾ 30.2 ಓವರ್‌ಗಳಲ್ಲಿ 142 ರನ್ ಸೇರಿಸಿ ಸೋಲು ಕಂಡಿತು. ಈ ಮೂಲಕ ಕಿವೀಸ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಶ್ರೀಲಂಕಾ ತಂಡದ ಸ್ಪಿನ್ ಬೌಲರ್ ಮಹೀಶ್ ತೀಕ್ಷಣ್ ಎರಡನೇ ಏಕದಿನ ಪಂದ್ಯದಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿದರು. ಇವರು 8 ಓವರ್ ಬೌಲಿಂಗ್ ಮಾಡಿ 44 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇದರಲ್ಲಿ ಹ್ಯಾಟ್ರಿಕ್ ಸಹ ಸೇರಿದೆ. ಮಹೀಶ್ ಇನಿಂಗ್ಸ್ 35ನೇ ಓವರ್‌ನ ಐದನೇ ಎಸೆತದಲ್ಲಿ ಮಿಚೆಲ್ ಸ್ಯಾಂಟ್ನರ್, ಆರನೇ ಎಸೆತದಲ್ಲಿ ನಾಥನ್ ಸ್ಮಿತ್ ಅವರನ್ನು ಔಟ್ ಮಾಡಿದ್ದರು. 37ನೇ ಓವರ್ ಬೌಲ್ ಮಾಡಿದ ಮಹೀಶ್ ಮೊದಲ ಎಸೆತದಲ್ಲಿ ಮ್ಯಾಟ್ ಹೆನ್ರಿ ಅವರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 31 ರನ್ ಆಗುವಷ್ಟರಲ್ಲಿ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ರಚಿನ್ ರವೀಂದ್ರ ಹಾಗೂ ಮಾರ್ಕ್ ಚಾಪ್‌ಮೆನ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಇವರು ಶತಕದ ಜೊತೆಯಾಟವನ್ನು ನೀಡಿ ತಂಡದ ಮೊತ್ತವನ್ನು ಹಿಗ್ಗಿಸಿದರು. ರಚಿನ್ 63 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 79 ರನ್ ಬಾರಿಸಿದರೆ, ಮಾರ್ಕ್ ಚಾಪ್‌ಮೆನ್ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 62 ರನ್ ಸಿಡಿಸಿದರು. ಉಳಿದ ಬ್ಯಾಟರ್‌ಗಳು ತಂಡದ ಮೊತ್ತ ಹಿಗ್ಗಿಸಿದರು.

ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡದ ಪರ ಕುಸಾಲ್ ಮೆಂಡೀಸ್ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 64 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ನೆಲಕಚ್ಚಿ ಬ್ಯಾಟ್ ಮಾಡಲಿಲ್ಲ. ವಿಲ್ ಒ'ರೂರ್ಕ್ ಕಿವೀಸ್ ಪರ ಮೂರು ವಿಕೆಟ್ ಪಡೆದರು.
ಮಹೀಶ್ ತೀಕ್ಷಣ್ ಅವರನ್ನು ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಖರೀದಿ ಮಾಡಿದೆ. ಇವರ ಮೂಲ ಬೆಲೆ 2 ಕೋಟಿ ಆಗಿತ್ತು. ಆದರೆ ಅವರ ಮೂಲ ಬೆಲೆಗಿಂತ ಹೆಚ್ಚಿನ ಹಣವನ್ನು ನೀಡಿ ಖರೀದಿಸಿತು. ರಾಯಲ್ಸ್ 4.40 ಕೋಟಿಗೆ ಮಹೀಶ್ ಅವರನ್ನು ಖರೀದಿ ಮಾಡಿದೆ. ಈಗಾಗಲೇ ಐಪಿಎಲ್‌ನಲ್ಲಿ ಮಿಂಚು ಹರಿಸಿರುವ ಮಹೀಶ್ ತೀಕ್ಷಣ್ ಆಡಿದ 27 ಪಂದ್ಯಗಳಲ್ಲಿ 31.88ರ ಸರಾಸರಿಯಲ್ಲಿ 25 ವಿಕೆಟ್ ಕಬಳಿಸಿದ್ದಾರೆ. ಈ ಬಾರಿ ಐಪಿಎಲ್ ಆವೃತ್ತಿಯಲ್ಲಿ ಇವರು ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಲಿದ್ದಾರೆ.