ಬಾಂಗ್ಲಾದೇಶ ತಂಡವು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಎ ಗುಂಪು ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಸೋಲುಗಳು ಮತ್ತು ಒಂದು ಪಂದ್ಯ ರದ್ದಾದ ಕಾರಣ ಬಾಂಗ್ಲಾದೇಶ ಹೊರಗುಳಿಯಬೇಕಾಯಿತು. ಬಾಂಗ್ಲಾದೇಶ ಕೇವಲ ಒಂದು ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯಬೇಕಾಯಿತು. ಬಾಂಗ್ಲಾದೇಶ ತಂಡ ಎ ಗುಂಪಿನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತು. ಆದರೆ ಪಾಕಿಸ್ತಾನ ವಿರುದ್ಧದ ಬಾಂಗ್ಲಾದೇಶದ ಕೊನೆಯ ಗುಂಪು ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಚಾಂಪಿಯನ್ಸ್ ಟ್ರೋಫಿ ನಂತರ ಬಾಂಗ್ಲಾದೇಶದ ಇಬ್ಬರು ಸ್ಟಾರ್ ಕ್ರಿಕೆಟಿಗರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.
ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯುತ್ತಿದ್ದಂತೆ ಮೊದಲು ಬಾಂಗ್ಲಾದೇಶದ ಅನುಭವಿ ವಿಕೆಟ್ ಕೀಪರ್-ಬ್ಯಾಟರ ಮುಷ್ಫಿಕರ್ ರಹೀಮ್ ನಿವೃತ್ತಿ ಘೋಷಿಸಿದರು. ಇದಾದ ಒಂದು ವಾರದ ನಂತರ, ಈಗ ಆಲ್‌ರೌಂಡರ್ ಮಹ್ಮದುಲ್ಲಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 39 ವರ್ಷದ ಮಹ್ಮದುಲ್ಲಾ ಅವರು ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿ ಘೋಷಣೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ತಮ್ಮ ತಂಡದ ಸಹಾ ಆಟಗಾರರು, ತರಬೇತುದಾರರು ಮತ್ತು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಮಹ್ಮದುಲ್ಲಾ ಬಾಂಗ್ಲಾದೇಶದ ಭರವಸೆಯ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಲ್ಲಿ ಒಬ್ಬರು. ಅವರು ಬಾಂಗ್ಲಾದೇಶದ ಪರ 17 ವರ್ಷಗಳ ಕಾಲ ಆಡಿದ್ದು, ಹಲವು ದಾಖಲೆಗಳನ್ನು ಮಾಡಿದ್ದಾರೆ. ಅವರು 239 ಏಕದಿನ, 50 ಟೆಸ್ಟ್ ಮತ್ತು 141 ಟಿ20 ಪಂದ್ಯಗಳನ್ನು ಆಡಿದ್ದಾರೆ. ಬಾಂಗ್ಲಾದೇಶದ ಹಲವು ಗೆಲುವುಗಳಲ್ಲ ಅವರು ಪ್ರಮುಖ ಪಾತ್ರ ವಹಿಸಿದರು. ಬ್ಯಾಟಿಂಗ್ ಆಗಿರಲಿ ಅಥವಾ ಆಫ್-ಸ್ಪಿನ್ ಬೌಲಿಂಗ್ ಆಗಿರಲಿ ಅವರು ಬಾಂಗ್ಲಾದೇಶದ ಕ್ರಿಕೆಟ್ ತಂಡದ ಆಧಾರಸ್ತಂಭವಾಗಿದ್ದರು.
ಮಹಮದುಲ್ಲಾ 141 ಟಿ20 ಪಂದ್ಯಗಳ 130 ಇನ್ನಿಂಗ್ಸ್‌ಗಳಲ್ಲಿ 117 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 2444 ರನ್ ಗಳಿಸಿದ್ದಾರೆ. ಇದರಲ್ಲಿ 8 ಅರ್ಧಶತಕಗಳೊಂದಿಗೆ 41 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು 239 ಏಕದಿನ ಪಂದ್ಯಗಳ 209 ಇನ್ನಿಂಗ್ಸ್‌ಗಳಲ್ಲಿ 4 ಶತಕಗಳು ಮತ್ತು 32 ಅರ್ಧಶತಕಗಳು ಮತ್ತು 82 ವಿಕೆಟ್‌ಗಳು ಸೇರಿದಂತೆ ಒಟ್ಟು 5689 ರನ್‌ಗಳನ್ನು ಕಲೆ ಹಾಕಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅವರ ಅತ್ಯಧಿಕ ಸ್ಕೋರ್ ಅಜೇಯ 128 ರನ್‌ಗಳು. ಇನ್ನೂ 50 ಟೆಸ್ಟ್ ಪಂದ್ಯಗಳ 97 ಇನ್ನಿಂಗ್ಸ್‌ಗಳಲ್ಲಿ ಅವರು 2914 ರನ್ ಗಳಿಸಿ 43 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಅವರು 5 ಶತಕಗಳು ಮತ್ತು 16 ಅರ್ಧಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಅತ್ಯಧಿಕ ಸ್ಕೋರ್ ಅಜೇಯ 150 ರನ್‌ಗಳು.
ಏಕದಿನ ವಿಶ್ವಕಪ್‌ನಲ್ಲಿ ಮೂರು ಶತಕಗಳನ್ನು ಗಳಿಸಿದ ಏಕೈಕ ಬಾಂಗ್ಲಾದೇಶದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಮಹ್ಮದುಲ್ಲಾ ಪಾತ್ರರಾಗಿದ್ದಾರೆ. 2015ರ ಏಕದಿನ ವಿಶ್ವಕಪ್ ವೇಳೆ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ಮಹ್ಮದುಲ್ಲಾ ಎರಡು ಶತಕ ಬಾರಿಸಿದರೆ, ಅವರ ಮೂರನೇ ಶತಕ 2023ರ ಏಕದಿನ ವಿಶ್ವಕಪ್‌ನಲ್ಲಿ ಬಂದಿತ್ತು.