ಯುಎಸ್‌ನಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಒಡೆತನದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡ ಕೇವಲ 50 ರನ್‌ಗಳಿಗೆ ಆಲೌಟ್ ಆಗಿದೆ. ಎಂಐ ನ್ಯೂಯಾರ್ಕ್ ವಿರುದ್ಧ 50 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿದೆ.
ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆದ ಮೇಜರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್ ತಂಡವು 105 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 156 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಎಂಐ ನ್ಯೂಯಾರ್ಕ್ ಬೌಲರ್‌ಗಳ ಶಿಸ್ತಿನ ಬೌಲಿಂಗ್‌ನಿಂದ 13.5 ಓವರ್‌ಗಳಲ್ಲಿ ಕೇವಲ 50 ರನ್‌ಗಳಿಗೆ ಆಲೌಟ್ ಆಯಿತು.

ಟಾಸ್ ಗೆದ್ದ ಎಂಐ ನ್ಯೂಯಾರ್ಕ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಡೆವಾಲ್ಡ್ ಬ್ರೆವಿಸ್ 15 ರನ್ ಗಳಿಸಿ ಔಟಾದರೆ, ಶಾಯನ್ ಜಹಾಂಗೀರ್ 4 ರನ್ ಗಳಿಸಿ ಔಟಾದರು.
ಮೊನಾಂಕ್ ಪಟೇಲ್ 4, ಹಮ್ಮದ್ ಆಜಂ 8, ಕೀರನ್ ಪೊಲ್ಲಾರ್ಡ್ 5, ಕಗಿಸೊ ರಬಾಡ 1, ನೊಸ್ತುಷ್ ಕೆಂಜಿಗೆ 2 ರನ್ ಗಳಿಸಿ ಔಟಾದರು. ನಿಕೋಲಸ್ ಪೂರನ್ 38 ರನ್ ಗಳಿಸಿದರೆ, ಟಿಮ್ ಡೇವಿಡ್ 21 ಎಸೆತಗಳಲ್ಲಿ 4 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 48 ರನ್ ಗಳಿಸಿ ಮಿಂಚಿದರು.
ಟಿಮ್ ಡೇವಿಡ್ ಸ್ಫೋಟಕ ಆಟದ ನೆರವಿನಿಂದ ಎಂಐ ನ್ಯೂಯಾರ್ಕ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿದರು. ಆಡಂ ಝಂಪಾ, ಕೊರ್‍ನೆ ಡ್ರೈ ಮತ್ತು ಆಲಿ ಖಾನ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಲೋಕೀ ಫರ್ಗ್ಯುಸನ್ 1 ವಿಕೆಟ್ ಪಡೆದುಕೊಂಡರು.
ಎಂಐ ನ್ಯೂಯಾರ್ಕ್ ನೀಡಿದ ಸವಾಲಿನ ಮೊತ್ತವನ್ನು ಬೆನ್ನತ್ತಿದ ಲಾಸ್ ಏಂಜಲಿಸ್ ನೈಟ್ ರೈಡರ್ಸ್ ಕೇವಲ 50 ರನ್‌ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. 2 ರನ್ ಗಳಿಸುವ ವೇಳೆಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಉನ್ಮುಕ್ತ್ ಚಾಂದ್ 26 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ದಾಟಲಿಲ್ಲ. ಮಾರ್ಟಿನ್ ಗಪ್ಟಿಲ್ 0, ರಿಲೀ ರೊಸ್ಸೊವ್ 2, ನಿತೀಶ್ ಕುಮಾರ್ 0, ಜಸ್ಕಾರನ್ ಮಲ್ಹೋತ್ರಾ 5, ಆಂಡ್ರೆ ರಸೆಲ್ 2, ಸುನಿಲ್ ನರೇನ್ 2, ಕೊರ್ನೆ ಡ್ರೈ 0, ಆಡಂ ಝಂಪಾ ಅಜೇಯ 6, ಆಲಿ ಖಾನ್ 4, ಲಾಕಿ ಫರ್ಗ್ಯುಸನ್ 0 ಗಳಿಸಿದರು.
ಟ್ರೆಂಟ್ ಬೌಲ್ಟ್, ನೊಸ್ತುಷ್ ಕೆಂಜಿಗೆ, ಕಗಿಸೊ ರಬಾಡ, ಇಶಾನ್ ಆದಿಲ್, ಕೀರನ್ ಪೊಲಾರ್ಡ್ ತಲಾ 2 ವಿಕೆಟ್ ಪಡೆದು ಮಿಂಚಿದರು.