ಆತನಿಗೆ ನಾಯಕತ್ವ ನೀಡಲಾಗದಿದ್ದರೆ ಆತನನ್ನು ತಂಡದಿಂದ ಬಿಟ್ಟುಬಿಡಿ; ಆರ್‌ಸಿಬಿಗೆ ಮಾಜಿ ಕ್ರಿಕೆಟಿಗನ ಸಲಹೆ

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯಗಳು ಮಾತ್ರ ಬಾಕಿ ಉಳಿದುಕೊಂಡಿವೆ ಹಾಗೂ ಪ್ಲೇ ಆಫ್ ಹಂತದ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ಈಗಾಗಲೇ ಮುಕ್ತಾಯವಾಗಿವೆ. ಕ್ವಾಲಿಫೈಯರ್ 1 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲುವುದರ ಮೂಲಕ ಕ್ವಾಲಿಫೈಯರ್ 2 ಪಂದ್ಯವನ್ನಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇತ್ತ ನಿನ್ನೆ ( ಅಕ್ಟೋಬರ್ 11 ) ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡ ಜಯಗಳಿಸಿದ್ದು ಕ್ವಾಲಿಫೈಯರ್ 2 ಪಂದ್ಯಕ್ಕೆ ಅರ್ಹತೆಯನ್ನು ಪಡೆದುಕೊಂಡಿದೆ. ಈ ಮಹತ್ವದ ಪಂದ್ಯದಲ್ಲಿ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ.
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯ ಯುಎಇ ಚರಣ ಆರಂಭವಾಗುವ ಮುನ್ನವೇ ನಾಯಕ ವಿರಾಟ್ ಕೊಹ್ಲಿ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಮುಗಿದ ಬಳಿಕ ತಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಣೆಯನ್ನು ಮಾಡಿದ್ದರು. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯವೇ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಕಣಕ್ಕಿಳಿದ ಕೊನೆಯ ಪಂದ್ಯವಾಗಿದೆ.
ಈ ಮೂಲಕ ಮುಂಬರಲಿರುವ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೂತನ ನಾಯಕ ಆಯ್ಕೆಯಾಗಲಿದ್ದಾರೆ. ಇದೇ ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕುರಿತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರನಾದ ಎಬಿ ಡಿವಿಲಿಯರ್ಸ್ ಕುರಿತಾಗಿ ಮಾತನಾಡಿದ್ದು ಆರ್‌ಸಿಬಿಗೆ ಈ ಕೆಳಕಂಡಂತೆ ಸಲಹೆ ನೀಡಿದ್ದಾರೆ.

ಎಬಿಡಿಗೆ ನಾಯಕತ್ವ ನೀಡದಿದ್ದರೆ ಆತನನ್ನು ತಂಡದಿಂದ ಬಿಟ್ಟುಬಿಡಿ
ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಬದಲು ನೂತನ ನಾಯಕನನ್ನು ನೇಮಿಸುವ ಅನಿವಾರ್ಯತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿದೆ. ಹೀಗಾಗಿ ವಿರಾಟ್ ಕೊಹ್ಲಿ ಬದಲು ಎಬಿ ಡಿವಿಲಿಯರ್ಸ್ ಹೆಗಲಿಗೆ ನಾಯಕತ್ವವನ್ನು ಹೊರಿಸುವ ಹಾಗಿದ್ದರೆ ಮಾತ್ರ ಆತನನ್ನು ತಂಡದಲ್ಲಿ ಇಟ್ಟುಕೊಳ್ಳಿ, ಇಲ್ಲದಿದ್ದರೆ ಆತನನ್ನು ತಂಡದಿಂದ ಕೈ ಬಿಟ್ಟು ಬಿಡಿ ಎಂದು ಬ್ರಾಡ್ ಹಾಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಸಲಹೆ ನೀಡಿದ್ದಾರೆ.

ಸರಿಯಾದ ಕ್ರಮಾಂಕದಲ್ಲಿ ಬ್ಯಾಟಿಂಗ್ ನೀಡಿ
ಇನ್ನೂ ಮುಂದುವರೆದು ಮಾತನಾಡಿರುವ ಬ್ರಾಡ್ ಹಾಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಬಿ ಡಿವಿಲಿಯರ್ಸ್ ಅವರಿಗೆ ಸರಿಯಾದ ಕ್ರಮಾಂಕದಲ್ಲಿ ಬ್ಯಾಟಿಂಗ್ ನೀಡಿಲ್ಲ ಎಂದಿದ್ದಾರೆ. 'ಎಬಿ ಡಿವಿಲಿಯರ್ಸ್ ಅವರನ್ನು ನಿಮ್ಮ ತಂಡದ ಪರ ಆಡಿಸುವ ಇಚ್ಛೆ ಇದ್ದರೆ ಆತನಿಗೆ ಸರಿಯಾದ ಕ್ರಮಾಂಕದಲ್ಲಿ ಬ್ಯಾಟಿಂಗ್ ನೀಡಿ. ಐದನೇ ಮತ್ತು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನೀಡುವುದು ಸರಿಯಲ್ಲ, ಆತನನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಸರಿಯಾಗಿ ತಿಳಿದಿರಬೇಕು' ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.

ಯುಎಇ ಚರಣದಲ್ಲಿ ಮಂಕಾದ ಎಬಿಡಿ
ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಯುಎಇ ಚರಣದಲ್ಲಿ ಮಂಕಾಗಿರುವ ಎಬಿ ಡಿವಿಲಿಯರ್ಸ್ ತಮ್ಮ ಕೊನೆಯ 8 ಪಂದ್ಯಗಳಲ್ಲಿ ಕ್ರಮವಾಗಿ 26, 19*, 23, 4*, 11, 12 ಮತ್ತು 0 ರನ್ ಗಳಿಸಿದ್ದಾರೆ. ಹೀಗೆ ಕಳೆದ 8 ಪಂದ್ಯಗಳಲ್ಲಿ ಸತತವಾಗಿ ಎಬಿ ಡಿವಿಲಿಯರ್ಸ್ ಮಂಕಾಗಿದ್ದಾರೆ. ಇಷ್ಟೂ ಪಂದ್ಯಗಳಲ್ಲಿಯೂ ಎಬಿಡಿ ಅಗ್ರ ಕ್ರಮಾಂಕದ ಬ್ಯಾಟಿಂಗ್ ಸ್ಥಾನವನ್ನು ಪಡೆದುಕೊಳ್ಳದಿರುವುದೇ ವಿಫಲತೆಗೆ ಕಾರಣವೆನ್ನಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications