
ಅನಿರೀಕ್ಷಿತವಾಗಿ ಮಾನ್ಚೆಸ್ಟರ್ ಪಂದ್ಯ ರದ್ದು, ಅಭಿಮಾನಿಗಳಿಗೆ ನಿರಾಸೆ
ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ಭಾರತ, ಅಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ಆಡುವುದರಲ್ಲಿತ್ತು. ನಾಲ್ಕು ಟೆಸ್ಟ್ ಪಂದ್ಯಗಳು ಈಗಾಗಲೇ ನಡೆದಿದ್ದವು. ಸರಣಿ 2-1ರಿಂದ ಭಾರತದ ವಶದಲ್ಲಿತ್ತು. ಆದರೆ ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ ಅನಿರೀಕ್ಷಿತವಾಗಿ ರದ್ದಾಗಿತ್ತು. ಕಾರಣ ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿದ್ದವು. ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್, ಇಬ್ಬರು ಫಿಸಿಯೋಗಳು ಕೋವಿಡ್-19 ಸೋಂಕಿಗೆ ತುತ್ತಾಗಿದ್ದರು. ಅಸಲಿಗೆ ನಾಲ್ಕನೇ ಟೆಸ್ಟ್ ವೇಳೆಯೇ ಭಾರತದ ಮೂವರು ಕೋಚ್‌ಗಳು ಮತ್ತು ಒಬ್ಬ ಫಿಸಿಯೋಗೆ ಕೋವಿಡ್ ಸೋಂಕು ತಗುಲಿತ್ತು. ಅಂತಿಮ ಟೆಸ್ಟ್‌ಗೂ ಮುನ್ನ ಇದ್ದ ಮತ್ತೊಬ್ಬ ಫಿಸಿಯೋಗೂ ಸೋಂಕು ತಗುಲಿದ್ದರಿಂದ ಭೀತಿಗೊಂಡ ಭಾರತ ಆಟಗಾರರು ಕೊನೇ ಟೆಸ್ಟ್ ಆಡಲು ಹಿಂದೇಟು ಹಾಕಿದ್ದರು. ಹೀಗಾಗಿ ಕೊನೇ ಟೆಸ್ಟ್ ಪಂದ್ಯ ರದ್ದು ಮಾಡಬೇಕಾದ ಒತ್ತಡಕ್ಕೆ ಇಂಗ್ಲೆಂಡ್ ಮತ್ತು ಭಾರತೀಯ ಕ್ರಿಕೆಟ್ ಬೋರ್ಡ್‌ಗಳು ಸಿಲುಕಿದ್ದವು.

ಟೆಸ್ಟ್ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆಯ ಗೊಂದಲಕ್ಕೆ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ. ಟೆಲಿಗ್ರಾಫ್ ವರದಿಯ ಪ್ರಕಾರ, "ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಭಾರತ-ಇಂಗ್ಲೆಂಡ್ ಐದನೇ ಟೆಸ್ಟ್ ಪಂದ್ಯ ರದ್ದಾಗಿದೆ. ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ)ಗೆ ಇದರಿಂದ ದೊಡ್ಡ ಮಟ್ಟದ ನಷ್ಟವಾಗಿದೆ. ಈ ನಷ್ಟವನ್ನು ಪೂರೈಸಿಕೊಳ್ಳುವುದು ಅವರಿಗೆ ಸುಲಭವಿಲ್ಲ. ನೋಡೋಣ, ಸಣ್ಣ ಮಟ್ಟಿಗಾದರೂ ಈ ಸಮಸ್ಯೆಗೆ ಪರಿಹಾರ ಹುಡುಕುವತ್ತ ಪ್ರಯತ್ನಿಸೋಣ. ಇದರ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳೋಣ. ಮುಂದಿನ ವರ್ಷ ಆ ಪಂದ್ಯ ಯಾವಾಗ ನಡೆದರೂ ಅದೊಂದು ಪ್ರತ್ಯೇಕ ಪಂದ್ಯವಾಗಿರುತ್ತದೆಯೇ ಹೊರತು ಅದು ಈ ಸರಣಿಯ ಮುಂದುವರೆದ ಭಾಗವಾಗಿರುವುದಿಲ್ಲ," ಎಂದು ಗಂಗೂಲಿ ತಿಳಿಸಿದ್ದಾರೆ. ಇದರ್ಥ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ನಾಲ್ಕೇ ಪಂದ್ಯದೊಂದಿಗೆ ಕೊನೆಗೊಂಡಂತಾಗಿದೆ. ಸರಣಿ 2-1ರಿಂದ ಭಾರತ ಗೆದ್ದಂತಾಗಿದೆ.

ಟೆಸ್ಟ್ ಪಂದ್ಯದ ಬದಲು ಮುಂದಿನ ವರ್ಷ 2 ಟಿ20ಐ ಪಂದ್ಯ
ಐದನೇ ಟೆಸ್ಟ್‌ಗೆ ಬದಲಾಗಿ ಮುಂದಿನ ವರ್ಷ ಎರಡು ಹೆಚ್ಚುವರಿ ಟಿ20 ಪಂದ್ಯಗಳನ್ನು ಆಡುವಂತೆ ಬಿಸಿಸಿಐ, ಇಸಿಬಿಗೆ ಆಫರ್ ನೀಡಿದೆ ಎಂಬ ಸುದ್ದಿ ಓಡಾಡುತ್ತಿದೆ ನಿಜ. ಆದರೆ ಇದು ಅಧಿಕೃತವಾಗಿಲ್ಲ. ಬಿಸಿಸಿಐ ಅಥವಾ ಇಸಿಬಿ ಈ ಬಗ್ಗೆ ಇನ್ನೂ ಏನೂ ಘೋಷಣೆ ಮಾಡಿಲ್ಲ. ಹೀಗಾಗಿ ಸ್ಪಷ್ಟನೆಗಾಗಿ ಕಾಯಬೇಕಾಗಿದೆ. ಮಾಹಿತಿಯೊಂದರ ಪ್ರಕಾರ ಮುಂದಿನ ವರ್ಷ ಜುಲೈನಲ್ಲಿ ಭಾರತ ತಂಡ ಇಂಗ್ಲೆಂಡ್‌ಗೆ ಮತ್ತೆ ಪ್ರವಾಸ ಹೋಗಲಿದೆ. ಆ ವೇಳೆ ಇಂಗ್ಲೆಂಡ್‌ಗೆ ಆಗಿರುವ ನಷ್ಟ ಪರಿಹಾರಕ್ಕೋಸ್ಕರ ಒಂದು ಟೆಸ್ಟ್ ಪಂದ್ಯ ನಡೆಸಬಹುದು. ಅಥವಾ ಟೆಸ್ಟ್‌ಗೆ ಬದಲಾಗಿ ಎರಡು ಹೆಚ್ಚುವರಿ ಟಿ20ಐ ಪಂದ್ಯಗಳನ್ನು ನಡೆಸಬಹುದು. ಒಟ್ಟಿನಲ್ಲಿ ರದ್ದಾಗಿರುವ ಒಂದು ಟೆಸ್ಟ್‌ನ ನಷ್ಟ ಭರಿಸಲು ಎರಡೂ ಕ್ರಿಕೆಟ್ ಬೋರ್ಡ್‌ಗಳು ಚರ್ಚಿಸಿ ಏನಾದರೂ ಒಂದು ತೀರ್ಮಾನಕ್ಕೆ ಬರಲಿವೆ. ಅಂದ್ಹಾಗೆ, 2022ರ ಜುಲೈನಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಹೋಗುವ ಟೀಮ್ ಇಂಡಿಯಾ, 3 ಟಿ20ಐ ಮತ್ತು 3 ಏಕದಿನ ಪಂದ್ಯಗಳನ್ನು ಆಡುವುದರಲ್ಲಿದೆ. ಈ ವೇಳೆ ಎರಡು ಹೆಚ್ಚುವರಿ ಟಿ20ಐ ಪಂದ್ಯಗಳನ್ನು ಆಡುವುದಾದರೆ 5 ಟಿ20 ಪಂದ್ಯಗಳನ್ನು ಭಾರತ ಆಡಬೇಕಾಗುತ್ತದೆ.

ಐದನೇ ಟೆಸ್ಟ್ ರದ್ದಿಗೆ ಸ್ಪಷ್ಟ ಕಾರಣ ಹೇಳಿದ ಗಂಗೂಲಿ
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಮತ್ತು ಒಬ್ಬ ಫಿಸಿಯೋ ಕೋವಿಡ್ ಸೋಂಕಿಗೀಡಾಗಿದ್ದರು. ಆದರೂ ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್ ವೇಳೆ ಕೋಚ್‌ಗಳಿಲ್ಲದೆ, ಬೆಂಬಲ ಸಿಬ್ಬಂದಿಯಿಲ್ಲದೆ ಆಡಿ ಪಂದ್ಯ ಗೆದ್ದಿತ್ತು. ಮ್ಯಾನ್ಚೆಸ್ಟರ್‌ನಲ್ಲಿ ನಡೆಯಲಿದ್ದ ಕೊನೇಯ ಟೆಸ್ಟ್‌ಗೆ ಮುನ್ನ ಭಾರತೀಯ ತಂಡದಲ್ಲಿದ್ದ ಒಬ್ಬ ಫಿಸಿಯೋ ಕೂಡ ಕೋವಿಡ್-19 ಸೋಂಕಿಗೆ ತುತ್ತಾಗಿದ್ದರಿಂದ ಪಂದ್ಯ ಆಡಲು ಭಾರತೀಯ ಕ್ರಿಕೆಟಿಗರು ಹಿಂದೇಟು ಹಾಕಿದ್ದರು. ಸೆಪ್ಟೆಂಬರ್ 10ರಂದು ಆರಂಭವಾಗಿದ್ದ ಟೆಸ್ಟ್ ಪಂದ್ಯವನ್ನು ಸ್ವಲ್ಪ ತಡವಾಗಿ ಆಚರಿಸಬೇಕು ಎಂದರೆ ಸೆಪ್ಟೆಂಬರ್ 19ರಂದು ಐಪಿಎಲ್ ಆರಂಭಗೊಳ್ಳಲಿದ್ದರಿಂದ ಅದೂ ಕೂಡ ಸಾಧ್ಯವಿರಲಿಲ್ಲ. ಹೀಗಾಗಿ ಅಂತಿಮವಾಗಿ ಪಂದ್ಯವನ್ನು ರದ್ದೆಂದು ಘೋಷಿಸಲಾಗಿತ್ತು. ಈ ವೇಳೆ ಕೆಲವರು ಭಾರತ ತಂಡದಲ್ಲಿ ಕೋಚ್‌ಗಳು, ಬೆಂಬಲ ಸಿಬ್ಬಂದಿ ಇಲ್ಲದಿರುವಾಗ ಟೆಸ್ಟ್ ಆಡೋದು ಹೇಗೆ ಎಂದು ಹೇಳಿದರೆ, ಇನ್ನು ಕೆಲವರು ಟೀಮ್ ಇಂಡಿಯಾಕ್ಕೆ ಟೆಸ್ಟ್ ಕ್ರಿಕೆಟ್‌ಗಿಂತ ನಗದು ಶ್ರೀಮಂತ ಐಪಿಎಲ್ ದೊಡ್ಡದಾಯ್ತು ಎಂದಿದ್ದರು. ಐದನೇ ಟೆಸ್ಟ್ ರದ್ದಿಗೆ ಐಪಿಎಲ್ ದೂರಿದವರಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಸೇರಿದಂತೆ ಇನ್ನೊಂದಿಷ್ಟು ಮಂದಿಯಿದ್ದರು. ಆದರೆ ಇದಕ್ಕೂ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಆಟಗಾರರು ಆಡಲು ನಿರಾಕರಿಸಿದ್ದರಿಂದ ಪಂದ್ಯ ರದ್ದಾಯಿತೇ ಹೊರತು ಐಪಿಎಲ್ ಕಾರಣಕ್ಕಾಗಿ ಅಲ್ಲ ಎಂದು ಗಂಗೂಲಿ ಹೇಳಿದ್ದಾರೆ.


Click it and Unblock the Notifications












