ಸೆಂಚುರಿಯನ್‌ನಲ್ಲಿ ಬುಧವಾರ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯ ನಡೆಯಿತು. ಈ ಪಂದ್ಯವನ್ನು ಭಾರತ 11 ರನ್‌ಗಳಿಂದ ಗೆದ್ದು, ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲು ಕಂಡಿರಬಹುದು ಆದರೆ, ಭರವಸೆಯ ಹೊಸ ಆಶಾಕಿರಣ ಮೂಡಿದೆ. ಆತಿಥೇಯ ತಂಡದ ಒಬ್ಬ ಬೌಲರ್, ಬ್ಯಾಟರ್‌ಗಳು ನಾಚಿಸುವಂತೆ ಬ್ಯಾಟ್ ಮಾಡಿ ದಾಖಲೆಯ ಪುಟದಲ್ಲಿ ತನ್ನ ಸ್ಥಾನವನ್ನು ನಮೂದಿಸಿದ್ದಾನೆ.
ಬುಧವಾರ ನಡೆದ ಪಂದ್ಯದಲ್ಲಿ ಒಟ್ಟು 427 ರನ್‌ಗಳು ಹರಿದು ಬಂದವು. ಟೀಮ್ ಇಂಡಿಯಾದ ಪರ ಯುವ ಆಟಗಾರ ತಿಲಕ್ ವರ್ಮಾ ಶತಕ ಬಾರಿಸಿ ಮಿಂಚಿದರು. ಆದರೆ ದಕ್ಷಿಣ ಆಫ್ರಿಕಾ ಪರ ವೇಗಿ ಮಾರ್ಕೊ ಜಾನ್ಸನ್, ಬಿರುಸಿನ ಬ್ಯಾಟಿಂಗ್ ನಡೆಸಿ ಎಲ್ಲರ ಚಿತ್ತವನ್ನು ಕದ್ದರು. ಇವರ ಆರ್ಭಟಕ್ಕೆ ಟೀಮ್ ಇಂಡಿಯಾ ಬೌಲರ್‌ಗಳು ಕೊಂಚ ಕಂಗಾಲಾದರು. ಇವರು ಜಸ್ಟ್ 54 ಎಸೆತಗಳಲ್ಲಿ 54 ರನ್ ಸಿಡಿಸಿದರು. ಈ ಪಂದ್ಯದಲ್ಲಿ ಜಾನ್ಸನ್ 4 ಬೌಂಡರಿ ಹಾಗೂ 5 ಸಿಕ್ಸರ್ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ.

ಮಾರ್ಕೊ ಜಾನ್ಸನ್ ಅಂಗಳಕ್ಕೆ ಇಳಿದಾಗಲೇ ಆಕ್ರಮಣಕಾರಿ ಮನೋಭಾವ ಕಂಡಿತು. ಇವರು ಎದುರಿಸಿದ ಮೊದಲ ಎಸೆತದಿಂದಲೇ ಭಾರತೀಯ ಬೌಲರ್‌ಗಳ ಮೇಲೆ ದರ್ಬಾರ ನಡೆಸಲು ಆರಂಭಿಸಿದರು. ಜಾನ್ಸನ್ ಆರ್ಭಟದ ಆಟದ ಫಲವಾಗಿ ದಕ್ಷಿಣ ಆಫ್ರಿಕಾ ಮತ್ತೆ ಪಂದ್ಯದಲ್ಲಿ ಪುಟಿದೇಳುವಂತೆ ಆಯಿತು.
ಈ ಪಂದ್ಯದಲ್ಲಿ ಸೋಲಿನ ಅಂತರವನ್ನು ಕಡಿಮೆ ಮಾಡಿದ ಮಾರ್ಕೊ ಜಾನ್ಸನ್ ಅವರಿಗೆ ಟೀಮ್ ಇಂಡಿಯಾದ ಭರವಸೆಯ ಬೌಲರ್ ಅರ್ಷದೀಪ್ ಸಿಂಗ್ ಖೆಡ್ಡಾ ತೋಡಿದರು. ಆದರೆ ಸಿಕ್ಕ ಅವಕಾಶದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಮಾರ್ಕೊ ಜಾನ್ಸನ್ ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದರು.

ಮಾರ್ಕೊ ಜಾನ್ಸನ್ ಭಾರತದ ವಿರುದ್ಧ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಟೀಂ ಇಂಡಿಯಾ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ಅತಿವೇಗವಾಗಿ ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಈ ಮೊದಲು ಈ ದಾಖಲೆ ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಅವರ ಹೆಸರಿನಲ್ಲಿತ್ತು. ಈಗ ಈ ದಾಖಲೆಯನ್ನು ಮಾರ್ಕೊ ಅಳಿಸಿ ಹಾಕಿದ್ದಾರೆ. ಕ್ಯಾಮರೂನ್ ಭಾರತದ ವಿರುದ್ಧ ಹೈದರಾಬಾದ್‌ನಲ್ಲಿ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.
ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಮೂಡಿ ಬಂದ ಎರಡನೇ ವೇಗದ ಅರ್ಧಶತಕ ಇದಾಗಿದೆ. ವೇಗದ ಅರ್ಧಶತಕ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ ಮಾರ್ಕೊ ಪಾಲಾಯಿತು. ಇದಕ್ಕು ಮುನ್ನ ದಕ್ಷಿಣ ಆಫ್ರಿಕಾದ ಸೂಪರ್ ಸ್ಟಾರ್ ಬ್ಯಾಟರ್ ಕ್ವಿಂಟನ್ ಡಿಕಾಕ್ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಈಗ ಈ ಪಟ್ಟಿಯಲ್ಲಿ ಮಾರ್ಕೊ ಜಾನ್ಸನ್ ಎರಡನೇ ಸ್ಥಾನದಲ್ಲಿದ್ದಾರೆ.