ಆಸ್ಟ್ರೇಲಿಯಾ ಪ್ರವಾಸಕ್ಕೆ ದಿನಗಣನೆ ಆರಂಭವಾಗಿದೆ. ಈ ಸರಣಿಗೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡದ ಮುಂದಾಳತ್ವವನ್ನು ಶುಭಮನ್ ಗಿಲ್ ಅವರಿಗೆ ನೀಡಲಾಗಿದೆ. ಈಗ ಆಸ್ಟ್ರೇಲಿಯಾ ಸಹ ಈ ಸರಣಿಗೆ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ಮೊದಲು ಟೀಮ್ ಇಂಡಿಯಾ ಏಕದಿನ ಪಂದ್ಯಗಳನ್ನು ಆಡಲಿದ್ದು, ಬಳಿಕ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಆಸೀಸ್ ಎರಡು ಪ್ರತೇಕ ತಂಡಗಳನ್ನು ಹೆಸರಿಸಿದೆ.
ಸೀಮಿತ ಓವರ್‌ಗಳ ಪಂದ್ಯದಲ್ಲಿ ಆಸೀಸ್ ತಂಡವನ್ನು ಮಿಷೆಲ್ ಮಾರ್ಷ್ ಮುನ್ನಡೆಸುತ್ತಿದ್ದಾರೆ. ಸ್ಟಾರ್ ವೇಗದ ಬೌಲರ್ ಮಿಚೆಲ್ ಮಾರ್ಷ್ ತಂಡಕ್ಕೆ ಮರಳಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಮ್ಯಾಟ್ ಶಾರ್ಟ್ ಅವರಿಗೂ ಸಹ ತಂಡದಲ್ಲಿ ಅವಕಾಶ ನೀಡಲಾಗಿದೆ. ಇನ್ನು ಮಿಚ್ ಓವನ್ ಈಗ ಸಂಪೂರ್ಣವಾಗಿ ಫಿಟ್ ಆಗಿದ್ದು ತಂಡಕ್ಕೆ ಕಂ ಬ್ಯಾಕ್ ಮಾಡಿದ್ದಾರೆ. ಭರವಸೆಯ ಆಟಗಾರ ಮಾರ್ನಸ್ ಲಂಬುಶೇನ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

ಆಸ್ಟ್ರೇಲಿಯಾ ಎ ಮತ್ತು ಕ್ವೀನ್ಸ್‌ಲ್ಯಾಂಡ್ ಪರ ಸ್ಥಿರ ಪ್ರದರ್ಶನ ನೀಡಿರುವ ಮ್ಯಾಥ್ಯೂ ರೆನ್ಶಾ 3 ವರ್ಷಗಳ ಬಳಿಕ ತಂಡವನ್ನು ಸೇರಿಕೊಂಡಿದ್ದಾರೆ. ಈ ಸರಣಿಯಲ್ಲಿ ಗಾಯದಿಂದ ಚೇತರಿಸಿಕೊಂಡಿರುವ ಜೋಶ್ ಇಂಗ್ಲೀಷ್ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಗ್ಲೇನ್ ಮ್ಯಾಕ್ಸ್‌ವೆಲ್ ಅವರು ತಂಡದಿಂದ ಹೊರ ನಡೆದಿದ್ದಾರೆ.
ದೇಶೀಯ ಋತು ಮತ್ತು ಟೆಸ್ಟ್ ಕ್ರಿಕೆಟ್‌ಗೆ ತಯಾರಾಗಲು ಆಟಗಾರರಿಗೆ ಸಮಯ ನೀಡಲಾಗುತ್ತಿದೆ. ಮುಂದಿನ ವರ್ಷದ ವಿಶ್ವಕಪ್‌ಗೆ ತಯಾರಿ ನಡೆಸಲು ಇದು ನಿರ್ಣಾಯಕವಾಗಿದೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಜಾರ್ಜ್ ಬೈಲಿ ತಿಳಿಸಿದ್ದಾರೆ.
ಈಗಾಗಲೇ ಈ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ನಾಯಕತ್ವವನ್ನು ರೋಹಿತ್ ಶರ್ಮಾ ಅವರಿಂದ ಕಸಿದು ಕೊಂಡು ಶುಭಮನ್ ಗಿಲ್ ಅವರಿಗೆ ನೀಡಲಾಗಿದೆ. ಶುಭಮನ್ ಗಿಲ್ ಅವರು ಈಗಾಗಲೇ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿದ್ದು, ಭರವಸೆ ಮೂಡಿಸಿದ್ದಾರೆ. ಇನ್ನು ಶುಭಮನ್ ಗಿಲ್ ಅವರಿಗೆ ಏಕದಿನ ನಾಯಕನಾಗಿ ಆಸೀಸ್ ಸರಣಿ ಮೊದಲ ಪರೀಕ್ಷೆ ಆಗಿರಲಿದೆ. ಭಾರತ ತಂಡದಲ್ಲಿ ರೋಹಿತ್, ವಿರಾಟ್ ಕಂ ಬ್ಯಾಕ್ ಮಾಡಿದ್ದಾರೆ.

ಆಸ್ಟ್ರೇಲಿಯಾದ ಏಕದಿನ ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಅಲೆಕ್ಸ್ ಕ್ಯಾರಿ, ಕೂಪರ್ ಕಾನೊಲಿ, ಬೆನ್ ಡ್ವಾರ್ಷಿಯಸ್, ನಾಥನ್ ಎಲ್ಲಿಸ್, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಓವನ್, ಮ್ಯಾಥ್ಯೂ ರೆನ್‌ಶಾ, ಮ್ಯಾಥ್ಯೂ ಶಾರ್ಟ್, ಮಿಚೆಲ್ ಸ್ಟಾರ್ಕ್, ಆಡಮ್ ಜಂಪಾ.
ಆಸ್ಟ್ರೇಲಿಯಾದ ಟಿ20ಐ ತಂಡ (ಮೊದಲ ಎರಡು ಪಂದ್ಯಗಳು): ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಟಿಮ್ ಡೇವಿಡ್, ಬೆನ್ ಡ್ವಾರ್ಷಿಯಸ್, ನಾಥನ್ ಎಲ್ಲಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಓವನ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಜಂಪಾ.