ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಸಂಭ್ರಮ ಕ್ರಿಕೆಟ್ ಜಗತ್ತಿನಲ್ಲಿ ಆವರಿಸಿದೆ. ಫೆಬ್ರವರಿ 19 ರಿಂದ ಪ್ರಾರಂಭವಾಗುವ ಮೆಗಾ ಟೂರ್ನಿಗೆ ಎಲ್ಲಾ ತಂಡಗಳು ಮಾರ್ಗಸೂಚಿಯನ್ನು ಸಿದ್ಧಪಡಿಸುವಲ್ಲಿ ನಿರತವಾಗಿವೆ. ಇಂತಹ ಸಂದರ್ಭದಲ್ಲಿ ನ್ಯೂಜಿಲೆಂಡ್‌ನ ಸ್ಟಾರ್ ಅನುಭವಿ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಮಾರ್ಟಿನ್ ಗಪ್ಟಿಲ್ ಕಳೆದ 14 ವರ್ಷಗಳಿಂದ ನ್ಯೂಜಿಲೆಂಡ್ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ರೆಕಾರ್ಡ್ ಹೋಲ್ಡರ್ ಖ್ಯಾತಿಯ ಗಪ್ಟಿಲ್ ಭಾವನಾತ್ಮಕ ಭಾಷಣದ ಮೂಲಕ ತಮ್ಮ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
ಮಾರ್ಟಿನ್ ಗಪ್ಟಿಲ್ ತಮ್ಮ ನಿವೃತ್ತಿ ಘೋಷಣೆ ಸಂದರ್ಭದಲ್ಲಿ ಭಾವುಕರಾಗಿದ್ದಾರೆ. ಯುವಕನಾಗಿದ್ದಾಗ ನ್ಯೂಜಿಲೆಂಡ್‌ಗಾಗಿ ಆಡುವುದು ನನ್ನ ಕನಸಾಗಿತ್ತು. ನಾನು ಹೆಮ್ಮೆಪಡುತ್ತೇನೆ, ನನ್ನ ದೇಶಕ್ಕಾಗಿ 367 ಪಂದ್ಯಗಳನ್ನು ಆಡಿರುವುದು ಅದೃಷ್ಟ ಎಂದು ಭಾವಿಸುತ್ತೇನೆ. ಮಹಾನ್ ವ್ಯಕ್ತಿಗಳ ಗುಂಪಿನೊಂದಿಗೆ ಸಿಲ್ವರ್ ಫರ್ನ್ ಧರಿಸಿ ಮಾಡಿದ ಕ್ಷಣಗಳು ಮತ್ತು ನೆನಪುಗಳನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ಎಂದಿದ್ದಾರೆ.

ನಾನು ನನ್ನ ಎಲ್ಲಾ ತಂಡದ ಸಹ ಆಟಗಾರರು ಮತ್ತು ನನ್ನೊಂದಿಗೆ ಇರುವ ಕೋಚಿಂಗ್ ಸಿಬ್ಬಂದಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ವಿಶೇಷವಾಗಿ 19 ವರ್ಷದೊಳಗಿನವರ ಮಟ್ಟದಿಂದ ನನಗೆ ತರಬೇತಿ ನೀಡಿದ ಮಾರ್ಕ್ ಒ'ಡೊನೆಲ್ ಅವರು ನನ್ನ ವೃತ್ತಿಜೀವನದುದ್ದಕ್ಕೂ ಬೆಂಬಲ ನೀಡಿದ್ದು, ನನಗೆ ಜ್ಞಾನದ ಮೂಲವಾಗಿದ್ದಾರೆ. ನನ್ನ ಮ್ಯಾನೇಜರ್ ಲಿಯಾನ್ನೆ ಮೆಕ್‌ಗೋಲ್ಡ್ರಿಕ್‌ಗೆ ವಿಶೇಷ ಧನ್ಯವಾದಗಳು. ತೆರೆಮರೆಯಲ್ಲಿರುವ ಎಲ್ಲಾ ಕೆಲಸಗಳು ಎಂದಿಗೂ ಗಮನಕ್ಕೆ ಬರಲಿಲ್ಲ. ನಿಮ್ಮ ಬೆಂಬಲಕ್ಕೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ ಎಂದು ಮಾರ್ಟಿನ್ ಗಪ್ಟಿಲ್ ಎಲ್ಲರಿಗೂ ಧನ್ಯವಾದ ತಿಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ.
ಮಾರ್ಟಿನ್ ಗಪ್ಟಿಲ್ 2009ರಲ್ಲಿ ನ್ಯೂಜಿಲೆಂಡ್ ತಂಡದ ಪರ ಎಲ್ಲಾ ಮೂರು ಸ್ವರೂಪಗಳಿಗೆ ಪದಾರ್ಪಣೆ ಮಾಡಿದರು. ಗಪ್ಟಿಲ್ ಏಕದಿನ ಕ್ರಿಕೆಟ್‌ನಲ್ಲಿ ಶತಕ ಬಾರಿಸುವ ಮೂಲಕ ತಮ್ಮ ಮೊದಲ ಪಂದ್ಯವನ್ನು ಸ್ಮರಣೀಯವಾಗಿಸಿದರು. ಅವರು 2022 ರಲ್ಲಿ ನ್ಯೂಜಿಲೆಂಡ್ ಪರ ತಮ್ಮ ಕೊನೆಯ ಪಂದ್ಯವನ್ನಾಡಿದ್ದರು. 2015ರ ಏಕದಿನ ವಿಶ್ವಕಪ್‌ನಲ್ಲಿ ಗುಪ್ಟಿಲ್ ದ್ವಿಶತಕ ಸಿಡಿಸುವ ಮೂಲಕ ದಾಖಲೆ ಸೃಷ್ಟಿಸಿದ್ದರು. ಗಪ್ಟಿಲ್ ಒಟ್ಟು
47 ಟೆಸ್ಟ್ ಪಂದ್ಯಗಳಲ್ಲಿ 2586 ರನ್ ಗಳಿಸಿದ್ದು, 198 ಏಕದಿನ ಪಂದ್ಯಗಳಲ್ಲಿ 7346 ರನ್ ಮತ್ತು 122 ಟಿ20 ಪಂದ್ಯಗಳಿಂದ 3531 ರನ್ ಕಲೆ ಹಾಕಿದ್ದಾರೆ.
ಮಾರ್ಟಿನ್ ಗಪ್ಟಿಲ್ 2019ರ ವಿಶ್ವಕಪ್‌ನಲ್ಲಿ ಭಾರತೀಯ ಅಭಿಮಾನಿಗಳನ್ನು ನೋಯಿಸಿದ್ದರು. ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಫಿನಿಶರ್ ಮತ್ತು ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಅವರನ್ನು ರನ್ ಔಟ್ ಮಾಡಿದ್ದರು. ಇದಾದ ಬಳಿಕ ಭಾರತ ತಂಡ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ಎಂಎಸ್ ಧೋನಿಗೆ ಇದು ಅತ್ಯಂತ ದುಃಖದ ವಿದಾಯವಾಗಿತ್ತು. ಇದಾದ ನಂತರ ಧೋನಿ ಟೀಮ್ ಇಂಡಿಯಾ ಪರ ನೀಲಿ ಜೆರ್ಸಿ ತೋಡಲಿಲ್ಲ.