2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಕ್ತಾಯದ ಬಳಿಕ, ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಉತ್ಸಾಹವು ಈಗಾಗಲೇ ವಿಶ್ವದಾದ್ಯಂತ ವೇಗವನ್ನು ಪಡೆದುಕೊಂಡಿದೆ.
ಏಕೆಂದರೆ, ಜೂನ್ ಮೊದಲ ವಾರದಲ್ಲಿ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಯಲಿರುವ ಐಸಿಸಿ ಪಂದ್ಯಾವಳಿಗಾಗಿ ಎಲ್ಲಾ 20 ರಾಷ್ಟ್ರಗಳು ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸಿವೆ.
ಇದೇ ವೇಳೆ ವೈಟ್-ಬಾಲ್ ಕ್ರಿಕೆಟ್‌ನ ಸ್ಫೋಟಕ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಅವರು ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ತಮ್ಮ ಸಂಭಾವ್ಯ ನಾಲ್ಕು ಸೆಮಿಫೈನಲಿಸ್ಟ್ ತಂಡಗಳನ್ನು ಆಯ್ಕೆ ಮಾಡಿದ್ದಾರೆ. ಅವುಗಳಲ್ಲಿ ಒಂದು ಅಂತಿಮವಾಗಿ ಐಸಿಸಿ ಪ್ರಶಸ್ತಿಯನ್ನು ಗೆಲ್ಲಬಹುದು ಎಂದು ಅಂದಾಜಿಸಿದ್ದಾರೆ.

ಕ್ರಿಕೆಟ್‌ಟೈಮ್ಸ್ ಉಲ್ಲೇಖಿಸಿದಂತೆ, ಮಾರ್ಟಿನ್ ಗಪ್ಟಿಲ್ ಅವರು ಭಾರತ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಪ್ರಬಲ ಸ್ಪರ್ಧಿಗಳು ಎಂದು ಕರೆದರು. ಆದರೆ, 2022ರ ಐಸಿಸಿ ಟಿ20 ವಿಶ್ವಕಪ್‌ನ ಫೈನಲಿಸ್ಟ್‌ಗಳು, ವಿಜೇತರಾದ ಇಂಗ್ಲೆಂಡ್ ಮತ್ತು ರನ್ನರ್-ಅಪ್ ಪಾಕಿಸ್ತಾನ ನಡುವೆ ಒಂದು ತಂಡವನ್ನು ಆಯ್ಕೆ ಮಾಡಲು ಹೆಣಗಾಡಿದರು.
ಭಾರತ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ಜೊತೆಗೆ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ಒಂದು ತಂಡ 2024ರ ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ ಎಂದು ಮಾರ್ಟಿನ್ ಗಪ್ಟಿಲ್ ಭವಿಷ್ಯ ನುಡಿದರು.
37 ವರ್ಷದ ಅನುಭವಿ ಕ್ರಿಕೆಟಿಗ ಮಾರ್ಟಿನ್ ಗಪ್ಟಿಲ್ ಅವರು ನ್ಯೂಜಿಲೆಂಡ್ ತಂಡದ ಟಿ20 ಸ್ಟಾರ್ ಆಗಿದ್ದಾರೆ. ಏಳು ಐಸಿಸಿ ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಟೂರ್ನಿಗಳಲ್ಲಿ ಆಡಿದ 28 ಪಂದ್ಯಗಳಲ್ಲಿ 610 ರನ್ ಗಳಿಸಿದ್ದಾರೆ.

ಒಟ್ಟಾರೆಯಾಗಿ, ಮಾರ್ಟಿನ್ ಗಪ್ಟಿಲ್ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರರಾಗಿದ್ದಾರೆ. 2009 ಮತ್ತು 2022ರ ನಡುವೆ 112 ಪಂದ್ಯಗಳಲ್ಲಿ 3,531 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು 20 ಅರ್ಧಶತಕಗಳನ್ನು ಬಾರಿಸಿದ್ದಾರೆ.
ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಸಹಯೋಗದೊಂದಿಗೆ ಮುಂಬರುವ ಟಿ20 ವಿಶ್ವಕಪ್ ಆವೃತ್ತಿಯು ಜೂನ್ 1ರಿಂದ ಪ್ರಾರಂಭವಾಗುತ್ತದೆ ಮತ್ತು ಜೂನ್ 29ರಂದು ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಳ್ಳುತ್ತದೆ. ಒಂಬತ್ತು ನಗರಗಳಲ್ಲಿ ಒಟ್ಟು 55 ಪಂದ್ಯಗಳನ್ನು ಆಡಲಾಗುತ್ತದೆ, ವೆಸ್ಟ್ ಇಂಡೀಸ್‌ನ ಆರು ಮತ್ತು ಯುಎಸ್ಎನ ಮೂರು ನಗರಗಳಲ್ಲಿ ನಡೆಯುತ್ತದೆ.
20 ರಾಷ್ಟ್ರಗಳು 2024ರ ಈ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಭಾಗವಹಿಸಲಿವೆ,. ಕೆನಡಾ, ಉಗಾಂಡಾ ಮತ್ತು ಯುನೈಟೆಡ್ ಸ್ಟೇಟ್ಸ್ ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಪಂದ್ಯಾವಳಿ ಆಡುತ್ತಿವೆ.