
ಧಾಕಾ, ಜುಲೈ 15: ಕೊರೊನಾವೈರಸ್ ಸೋಂಕಿನಿಂದ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಶ್ರಾಫೆ ಮೊರ್ತಾಝ ಚೇತರಿಸಿಕೊಂಡಿದ್ದಾರೆ. ಸೋಂಕಿಗೀಡಾಗಿದ್ದ ಮಶ್ರಾಫೆ ಜೂನ್ 20ರಿಂದಲೂ ಮನೆಯಲ್ಲಿದ್ದು ಚಿಕಿತ್ಸೆ ಪಡೆದುಕೊಂಡಿದ್ದರು. ತನಗೆ ಕೋವಿಡ್-19 ನೆಗೆಟಿವ್ ಇರುವುದನ್ನು ಮೊರ್ತಾಝ ಮಂಗಳವಾರ ತಿಳಿಸಿದ್ದಾರೆ.
'ಎಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ದೇವರ ಅನುಗ್ರಹ ಎಲ್ಲರ ಮೇಲಿರುವುದರಿಂದ ನನ್ನ ಕೊರೊನಾವೈರಸ್ ಫಲಿತಾಂಶ ನೆಗೆಟಿವ್ ಎಂದು ಬಂದಿದೆ. ನನ್ನ ಬೆಂಬಲಕ್ಕೆ ನಿಂತು ಕಾಳಜಿ ತೋರಿಸಿದ್ದಕ್ಕಾಗಿ ನಾನು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ,' ಎಂದು ಮೊರ್ತಾಝ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿರುವ ಮಶ್ರಾಫೆ, 'ಮನೆಯಲ್ಲಿದ್ದು ಚಿಕಿತ್ಸೆ ಪಡೆದುಕೊಂಡಿದ್ದರಿಂದ ನಾನೀಗ ಕೋವಿಡ್-19ನಿಂದ ಸಂಪೂರ್ಣ ಚೇತರಿಸಿಕೊಂಡಿದ್ದೇನೆ. ಯಾರಿಗೆಲ್ಲ ಮಾರಕ ಸೋಂಕು ತಗುಲಿದೆಯೋ ಅವರೆಲ್ಲ ಸಕಾರಾತ್ಮಕವಾಗಿರಿ, ಧೈರ್ಯವಾಗಿರಿ. ದೇವರ ಮೇಲೆ ನಂಬಿಕೆಯಿಡಿ. ನಾವು ಜೊತೆಯಾಗಿ ಮಾರಕ ಸೋಂಕಿನ ವಿರುದ್ಧ ಹೋರಾಡೋಣ,' ಎಂದಿದ್ದಾರೆ.
ಮೊಶ್ರಾಫೆ ಅವರ ಪತ್ನಿ ಸುಮೋನಾ ಹಕ್ ಇನ್ನಷ್ಟೇ ಕೊರೊನಾದಿಂದ ಚೇತರಿಸಿಕೊಳ್ಳಬೇಕಿದೆ. 'ರೋಗ ಪತ್ತೆಯಾಗಿ ಎರಡು ವಾರಗಳು ಕಳೆದಿದ್ದರೂ ನನ್ನ ಪತ್ನಿ ಈಗಲೂ ಕೊರೊನಾ ಪಾಸಿಟಿವ್ ಆಗಿದ್ದಾರೆ. ಉಳಿದಂತೆ ಆಕೆ ಚೆನ್ನಾಗಿದ್ದಾಳೆ. ಅವಳಿಗೆ ನಿಮ್ಮ ಪ್ರಾರ್ಥನೆಯಿರಲಿ,' ಎಂದು ಮಶ್ರಾಫ್ ಹೇಳಿದರು.