ಧೋನಿ ಬೊಂಬಾಟ್ ಆಟ, ಹರಿಣಗಳನ್ನು ಬಗ್ಗು ಬಡಿದ ಭಾರತ
ಇಂದೋರ್, ಅ.14: ಸತತವಾಗಿ ಮೂರು ಟಾಸ್, ಮೂರು ಪಂದ್ಯ ಸೋತಿರುವ ನಾಯಕ ಎಂಎಸ್ ಧೋನಿ ಅವರು ಮೊದಲ ಬಾರಿಗೆ ಟಾಸ್ ಗೆದ್ದಿದ್ದೇ ಭಾರತದ ಪಾಲಿಗೆ ಅದೃಷ್ಟ ಒಲಿಯುವಂತೆ ಮಾಡಿತು. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಾಯಕ ಧೋನಿ ಆಕರ್ಷಕ ಅರ್ಧಶತಕದ ನೆರವಿನಿಂದ 50 ಓವರ್ ಗಳಲ್ಲಿ 247/9 ಸ್ಕೋರ್ ಮಾಡಿತು. ಆದರೆ, ರನ್ ಚೇಸಿಂಗ್ ನಲ್ಲಿ ಎಡವಿದ ಎಬಿಡಿ ಪಡೆ 22 ರನ್ ಗಳಿಂದ ಪಂದ್ಯವನ್ನು ಕಳೆದುಕೊಂಡಿತು.
ದಕ್ಷಿಣ ಆಫ್ರಿಕಾ ರನ್ ಚೇಸ್: ರನ್ ಹೊಳೆ ಹರಿಸಬಹುದಾದ ಪಿಚ್ ನಲ್ಲಿ ಸಾಧಾರಣ ಎನ್ನಬಹುದಾದ ಗುರಿಯನ್ನು ಮುಟ್ಟಲು ಬಂದ ಆರಂಭಿಕ ಬ್ಯಾಟ್ಸ್ ಮನ್ ಹಶೀಂ ಆಮ್ಲಾ ಹಾಗೂ ಡಿ ಕಾಕ್ ಇಬ್ಬರು ಉತ್ತಮ ಆರಂಭ ಒದಗಿಸಿದರು. ಆಮ್ಲಾ(17)ರನ್ನು ಎಂಎಸ್ ಧೋನಿ ಸ್ಟಂಪ್ ಮಾಡುತ್ತಿದ್ದಂತೆ ಟೀಂ ಇಂಡಿಯಾದಲ್ಲಿ ಹುರುಪು ಹೆಚ್ಚಾಯಿತು. ಡಿ ಕಾಕ್ 34 ರನ್ ಗಳಿಸಿ ಹರ್ಭಜನ್ ಸಿಂಗ್ ಗೆ ವಿಕೆಟ್ ಒಪ್ಪಿಸಿದರು. ಫ್ಲಾಫ್ ಡು ಪ್ಲೆಸಿಸ್ 51 ಹಾಗೂ ಜೆಪಿ ಡುಮಿನಿ 36 ರನ್ ಗಳಿಸಿ ಉತ್ತಮ ಜೊತೆಯಾಟ ಪ್ರದರ್ಶಿಸಿದರು.
ಆದರೆ, ಏಳು ರನ್ ಅಂತರದಲ್ಲಿ ಇಬ್ಬರು ವಿಕೆಟ್ ಒಪ್ಪಿಸಿದರು. ಡೇವಿಡ್ ಮಿಲ್ಲರ್ 'ಗೋಲ್ಡನ್ ಡಕ್' ಹೊಡೆದರು. 19 ರನ್ ಗಳಿಸಿದ್ದ ನಾಯಕ ಎಬಿ ಡಿವಿಲಿಯರ್ಸ್ ಅವರ ಕ್ಯಾಚನ್ನು ವಿರಾಟ್ ಕೊಹ್ಲಿ ಅದ್ಭುತವಾಗಿ ಹಿಡಿಯುತ್ತಿದ್ದಂತೆ ಭಾರತಕ್ಕೆ ಗೆಲುವಿನ ಕನಸು ನನಸಾಗುವ ದಾರಿ ಕಂಡಿತು. ಬೆಹರ್ದೀನ್ 18 ರನ್ ಗಳಿಸಿ ಭಜ್ಜಿಗೆ ವಿಕೆಟ್ ಒಪ್ಪಿಸಿದರು.
ಸ್ಪಿನ್ನರ್ ಅಕ್ಷರ್ ಪಟೇಲ್ 39/3 ಗಳಿಸಿ ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಭುವನೇಶ್ವರ್ 8.1 ಓವರ್ ಗಳಲ್ಲಿ 41/3 ಗಳಿಸಿದರೆ, ಹರ್ಭಜನ್ ಸಿಂಗ್ ಎರಡು ಹಾಗೂ ಉಮೇಶ್ ಯಾದವ್, ಮೋಹಿತ್ ಶರ್ಮ ತಲಾ ಒಂದು ವಿಕೆಟ್ ಪಡೆದರು.
ಧೋನಿ ಕಮಾಲ್: ಎಡಗೈ ನಲ್ಲಿ ಟಾಸ್ ಚಿಮ್ಮಿಸಿ ಮೊದಲ ಬಾರಿಗೆ ಟಾಸ್ ಗೆದ್ದ ಧೋನಿ ಅವರು 86 ಎಸೆತಗಳಲ್ಲಿ 92ರನ್ ಗಳಿಸಿ ತಂಡಕ್ಕೆ ಆಸರೆಯಾದರು.7 ಬೌಂಡರಿ ಹಾಗೂ 4 ಆಕರ್ಷಕ ಸಿಕ್ಸರ್ ಸಿಡಿಸಿದ ಧೋನಿ ಅವರನ್ನು ಬಿಟ್ಟರೆ ಅಜಿಂಕ್ಯ ರಾಹನೆ ಮಧ್ಯಮ ಕ್ರಮಾಂಕದಲ್ಲಿ 51 ರನ್ (63 ಎಸೆತ, 6x4) ತಂಡದ ಮೊತ್ತ ಹೆಚ್ಚಿಸಿದರು.

ರೋಹಿತ್ ಶರ್ಮ 3 ಹಾಗೂ ಶಿಖರ್ ಧವನ್ 23 ರನ್ ಗಳಿಸಿ ಔಟಾದ ಬಳಿಕ ವಿರಾಟ್ ಕೊಹ್ಲಿ (12) ಅವರು ಇಲ್ಲದ ಎರಡನೇ ರನ್ ಕದಿಯಲು ಯತ್ನಿಸಿ ಅನಗತ್ಯವಾಗಿ ರನೌಟ್ ಆದರು. ರೈನಾ ಶೂನ್ಯ ಸುತ್ತಿದರೆ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಭಜನ್ ಅವರು ಧೋನಿಗೆ ಸಾಥ್ ನೀಡಿದರು.
ದಕ್ಷಿಣ ಆಫ್ರಿಕಾ ಪರ ಡೇಲ್ ಸ್ಟೈನ್ 3, ರಬಡಾ 1, ಮಾರ್ನೆ ಮಾರ್ಕೆಲ್, ಇಮ್ರಾನ್ ತಾಹೀರ್ ತಲಾ 2 ವಿಕೆಟ್ ಪಡೆದರು.
ಟಾಸ್ ವರದಿ: ಟೀಂ ಇಂಡಿಯಾದ ಆಡುವ XI ರಲ್ಲಿ ಮೂರು ಬದಲಾವಣೆ ಕಂಡು ಬಂದಿದೆ. ಇಂದೋರಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಭಾರತ ಈ ವರೆಗೆ 3 ಏಕದಿನ ಪಂದ್ಯಗಳನ್ನು ಆಡಿದೆ. ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಆದರೆ, ದಕ್ಷಿಣ ಆಫ್ರಿಕಾವನ್ನು ಇಲ್ಲಿ ಮೊದಲ ಬಾರಿ ಎದುರಿಸುತ್ತಿದೆ. ಇಲ್ಲಿ ರನ್ ಪ್ರವಾಹ ಹರಿಯುವ ನಿರೀಕ್ಷೆ ಇದೆ.
ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ 5 ರನ್ ಗಳ ರೋಚಕ ಜಯ ದಾಖಲಿಸಿದೆ. ಕಾನ್ಪುರದ ಪಂದ್ಯದಲ್ಲಿ ರೋಹಿತ್ ಶರ್ಮ ಅವರು 150ರನ್ ಬಾರಿಸಿದರೂ 304ರನ್ ಚೇಸ್ ಮಾಡಲು ಟೀಂ ಇಂಡಿಯಾಗೆ ಸಾಧ್ಯವಾಗಲಿಲ್ಲ. ಮೂರನೇ ಏಕದಿನ ಪಂದ್ಯ ರಾಜ್ ಕೋಟ್ ನಲ್ಲಿ ಅಕ್ಟೋಬರ್ 18(ಭಾನುವಾರ) ನಡೆಯಲಿದೆ.

ಹೋಳ್ಕರ್ ಸ್ಟೇಡಿಯಂನಲ್ಲಿ 2011ರಲ್ಲಿ ನಡೆದ ವಿಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ಆರಂಭಿಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್(219) ನೆರವಿನಲ್ಲಿ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 418 ರನ್ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.[ಗಾಂಧಿ-ಮಂಡೇಲಾ ಕ್ರಿಕೆಟ್ ಸರಣಿ ಫುಲ್ ಗೈಡ್]
ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ ಹಾಗೂ ವಿಕೆಟ್ ಕೀಪರ್), ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ, ಹರ್ಭಜನ್ ಸಿಂಗ್, ಭುವನೇಶ್ವರ ಕುಮಾರ್, ಮೋಹಿತ್ ಶರ್ಮ, ಉಮೇಶ್ ಯಾದವ್.
ದಕ್ಷಿಣ ಆಫ್ರಿಕಾ : ಎಬಿ ಡಿವಿಲಿಯರ್ಸ್(ನಾಯಕ), ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಹಶಿಮ್ ಅಮ್ಲ, ಎಫ್ ಡು ಪ್ಲೆಸಿಸ್, ಜೆಪಿ ಡುಮಿನಿ, ಡೇವಿಡ್ ಮಿಲ್ಲರ್, ಡೇಲ್ ಸ್ಟೇನ್, ಮೊರ್ನೆ ಮೊರ್ಕೆಲ್, ಕಾಗಿಸೊ ರಬಾಡ, ಇಮ್ರಾನ್ ತಾಹಿರ್ (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications