ಟಿ20 ವಿಶ್ವಕಪ್‌ನಲ್ಲಿ ಸೂಪರ್ 8 ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲ್ಲುವ ಪಂದ್ಯವನ್ನು ಕೈ ಚೆಲ್ಲಿದೆ. ಸೂಪರ್ 8 ಹಂತದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ಇಂಗ್ಲೆಂಡ್ ಆತ್ಮವಿಶ್ವಾಸದಿಂದ ಸೆಮಿಫೈನಲ್ ಪ್ರವೇಶಿಸಿದೆ. ಈಗಾಗಲೇ ನ್ಯೂಜಿಲೆಂಡ್ ಉಪಾಂತ್ಯದ ಹಂತಕ್ಕೆ ಒಂದು ಕಾಲು ಇಟ್ಟಿದೆ. ಆದರೆ ಈ ಗುಂಪಿನ ಕೊನೆಯ ಸೂಪರ್ 8 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಪಾಕ್ ಭಾರೀ ಅಂತರದಿಂದ ಗೆದ್ದು ರನ್ ರೇಟ್ ಸುಧಾರಿಸಿಕೊಳ್ಳ ಬೇಕಿದೆ. ಈ ಪಂದ್ಯವನ್ನು ನ್ಯೂಜಿಲೆಂಡ್ ಸಹ ನೋಡುತ್ತಿದೆ.
ನ್ಯೂಜಿಲೆಂಡ್ ತಂಡ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸುತ್ತದೋ ಇಲ್ಲವೋ ಎಂಬುದು ಶನಿವಾರ ಇತ್ಯರ್ಥವಾಗುತ್ತದೆ. ಈ ನಡುವೆ ಕಿವೀಸ್ ಕ್ಯಾಂಪ್‌ನಿಂದ ಬರುತ್ತಿರುವ ಒಂದು ಸುದ್ದಿ ನಿಜಕ್ಕೂ ನಾಯಕ ಮಿಚೆಲ್ ಸ್ಯಾಂಟ್ನರ್ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿವೆ. ಹಾಗಿದರೆ ಆ ಸುದ್ದಿ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ನ್ಯೂಜಿಲೆಂಡ್ ತಂಡದ ಪರ ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವೇಗದ ಬೌಲರ್ ಮ್ಯಾಟ್ ಹೆನ್ರಿ ಟೂರ್ನಿಯ ಮಧ್ಯದಲ್ಲೇ ತವರಿಗೆ ಮರಳಲು ಸಿದ್ಧರಾಗುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದ ಬಳಿಕ ಮ್ಯಾಟ್ ಹೆನ್ರಿ ತವರಿನ ಫ್ಲೈಟ್ ಏರಲಿದ್ದಾರೆ ಎಂಬ ಸುದ್ದಿಗಳು ಬಂದಿದ್ದವು. ಅವರು ತಂದೆಯಾಗಲಿದ್ದಾರೆ ಎಂಬ ಸುದ್ದಿ ತಿಳಿದಿದೆ. ಇದೇ ಕಾರಣಕ್ಕಾಗಿ ಅವರು ತವರಿನತ್ತ ಮುಖ ಮಾಡಿದ್ದಾರೆ. ಒಂದು ವೇಳೆ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದರೆ ಮ್ಯಾಟ್ ಹೆನ್ರಿ ಆ ಪಂದ್ಯದಲ್ಲಿ ಅಖಾಡಕ್ಕೆ ಇಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ವರದಿಗಳು ತಿಳಿಸುತ್ತಿವೆ. ಇನ್ನು ನ್ಯೂಜಿಲೆಂಡ್ ಸೆಮಿಫೈನಲ್ ತಲುಪಿದರೆ, ಮಾರ್ಚ್ 4 ಅಥವಾ 5 ರಂದು ಮತ್ತೆ ಆಡಬೇಕಾಗುತ್ತದೆ.
34 ವರ್ಷದ ಮ್ಯಾಟ್ ಹೆನ್ರಿ ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದಾರೆ. ಇವರು ಆಡಿದ 7 ಪಂದ್ಯಗಳಲ್ಲಿ 7 ವಿಕೆಟ್ ಪಡೆದು ಭರವಸೆ ಮೂಡಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಹೆನ್ರಿ ಕಿವೀಸ್ ಪರ 41 ಪಂದ್ಯಗಳನ್ನು ಆಡಿದ್ದು 50 ವಿಕೆಟ್ ಪಡೆದಿದ್ದಾರೆ.
ಸೂಪರ್ 8 ಹಂತದ ಎರಡನೇ ಗುಂಪಿನಲ್ಲಿ ಆಡಿದ ಮೂರು ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ ಈಗಾಗಲೇ ಸೆಮಿಫೈನಲ್ ಹಂತವನ್ನು ತಲುಪಿದೆ. ಇನ್ನು ಅಂಕ ಪಟ್ಟಿಯಲ್ಲಿ ನ್ಯೂಜಿಲೆಂಡ್ ಸದ್ಯ ಎರಡನೇ ಸ್ಥಾನದಲ್ಲಿದೆ. ಆಡಿದ 3 ಪಂದ್ಯಗಳಲ್ಲಿ, 1 ಜಯ, 1 ಸೋಲು, 1 ಪಂದ್ಯ ರದ್ದಾಗಿದ್ದು, 3 ಅಂಕಗಳನ್ನು ಕಲೆ ಹಾಕಿದೆ. ಈ ವೇಳೆ ನ್ಯೂಜಿಲೆಂಡ್ ರನ್ ರೇಟ್ 1.390 ಅಮೋಘವಾಗಿದೆ. ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ ದೊಡ್ಡ ಅಂತರದ ಗೆಲುವು ದಾಖಲಿಸುವ ಅನಿವಾರ್ಯತೆ ಇದೆ. ಕಾರಣ ಪಾಕಿಸ್ತಾನ ನೆಟ್ ರನ್ ರೇಟ್ -0.461 ಆಗಿದೆ.