ಇನ್ನೇನು ಕೆಲವೇ ದಿನಗಳಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪ್ರಕಟಿಸಬೇಖಿದೆ. ಈ ಸರಣಿಯಲ್ಲಿ ಹಲವು ಸ್ಟಾರ್ ಆಟಗಾರರು ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಇನ್ನು ಈ ತಂಡದಲ್ಲಿ ಸ್ಥಾನ ಪಡೆಯಲು ಹಲವು ಭರವಸೆಯ ಆಟಗಾರರು ಸಜ್ಜಾಗಿದ್ದಾರೆ. ಇವರು ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟುತ್ತಿದ್ದಾರೆ.
ಭಾರತ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಭಾರತ ಈ ಸರಣಿಯಲ್ಲಿ 1-3ರಿಂದ ಹಿನ್ನಡೆ ಅನುಭವಿಸಿದ್ದು, ಸರಣಿಯನ್ನು ಚೆಲ್ಲಿದೆ. ದಶಕಗಳ ಬಳಿಕ ಭಾರತ ಆಸ್ಟ್ರೇಲಿಯಾದಲ್ಲಿ ಸರಣಿಯಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದೆ. ಹೀಗಾಗಿ ಭಾರತ ತಂಡದಲ್ಲಿ ಬದಲಾವಣೆಯ ಗಾಳಿ ಬೀಸುವ ಸಾಧ್ಯತೆ ಇದೆ.

ದೇಶೀಯ ಟೂರ್ನಿಯಲ್ಲಿ ಭಾರತದ ಭರವಸೆಯ ಆಟಗಾರರು ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸುತ್ತಿದ್ದಾರೆ. ಇವರು ತಮ್ಮ ಆಟದ ಪ್ರದರ್ಶನದ ಮೂಲಕ ಬಿಸಿಸಿಐ ಆಯ್ಕೆ ಸಮಿತಿಯ ಚಿತ್ತ ಕದ್ದಿದ್ದಾರೆ. ಈ ಆಟಗಾರರ ಪಟ್ಟಿಯಲ್ಲಿ ಇಬ್ಬರು ಕನ್ನಡಿಗರು ಕಾಣಿಸಿಕೊಳ್ಳುವುದು ವಿಶೇಷವಾಗಿದೆ. ಹಲವು ವರ್ಷಗಳಿಂದ ಭಾರತ ತಂಡದಿಂದ ದೂರಗುಳಿದಿರುವ ಇವರು ಮತ್ತೆ ತಂಡದಲ್ಲಿ ಅಬ್ಬರಿಸಲು ಪ್ಲ್ಯಾನ್ ನಡೆಸಿದ್ದಾರೆ.
ಈಗಾಗಲೇ ಭಾರತ ತಂಡದ ಪರ ಬ್ಯಾಟ್ ಮಾಡಿ ಅಬ್ಬರಿಸಿರುವ ಆಟಗಾರರಲ್ಲಿ ಕರ್ನಾಟಕದ ಮಯಾಂಕ್ ಅಗರ್‌ವಾಲ್ ಒಬ್ಬರು. ಇವರು 2018 ಮೆಲ್ಬೋರ್ನ್‌ನಲ್ಲಿ ಭಾರತದ ಪರ ಟೆಸ್ಟ್ ಪಂದ್ಯವನ್ನು ಆಡುವ ಅವಕಾಶ ಪಡೆದರು. ಅಲ್ಲದೆ ಸ್ಥಿರವಾಗಿ ಕೆಲವು ವರ್ಷ ತಂಡದ ಭಾಗ ವಾಗಿದ್ದರು. ಆದರೆ 2022ರ ಬಳಿಕ ಅವರನ್ನು ತಂಡದಿಂದ ಕೈ ಬಿಡಲಾಯಿತು. ಮಯಾಂಕ್ ಆಡಿದ 21 ಟೆಸ್ಟ್ ಪಂದ್ಯಗಳಲ್ಲಿ 1488 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 4 ಶತಕ, 6 ಅರ್ಧಶತಕಗಳು ಸೇರಿವೆ. ಇನ್ನು ಇವರು ಐದು ಏಕದಿನ ಪಂದ್ಯಗಳನ್ನು ಆಡಿದ ಅನುಭವ ಸಹ ಹೊಂದಿದ್ದಾರೆ.
ಮಯಾಂಕ್ ಅಗರ್‌ವಾಲ್ ದೇಶೀಯ ಟೂರ್ನಿಯಲ್ಲಿ ಅಬ್ಬರ ನಡೆಸಿದ್ದಾರೆ. ಇವರು ವಿಜಯ್ ಹಜಾರೆ ಏಕದಿನ ಸರಣಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 4 ಶತಕ ಹಾಗೂ 1 ಅರ್ಧಶತಕ ಸಹಾಯದಿಂದ 153.25ರ ಸರಾಸರಿಯಲ್ಲಿ 613 ರನ್ ಕಲೆ ಹಾಕಿದ್ದಾರೆ. ಇವರು ಸದ್ಯ ಭಾರತ ತಂಡದ ಆಯ್ಕೆ ಸಮಿತಿಯ ಕದ ಬಡಿಯುತ್ತಿದ್ದಾರೆ.
ಕರ್ನಾಟಕದ ಕರುಣ್ ನಾಯರ್, ದೇಶೀಯ ಟೂರ್ನಿಯಲ್ಲಿ ಸದ್ಯ ವಿದರ್ಭ ತಂಡದ ಪರ ಆಡುತ್ತಿದ್ದಾರೆ. ಇವರು ತಮ್ಮ ಸ್ಥಿರ ಬ್ಯಾಟಿಂಗ್‌ನಿಂದ ಸದ್ಯ ಎಲ್ಲರ ಚಿತ್ತ ಕದ್ದಿದ್ದಾರೆ. ಇವರು ದೇಶೀಯ ಟೂರ್ನಿಯಲ್ಲಿ ಆಡಿದ 6 ಪಂದ್ಯಗಳಲ್ಲಿ 4 ಶತಕದ ನೆರವಿನಿಂದ 542 ರನ್ ಸಿಡಿಸಿದ್ದಾರೆ. ಇನ್ನು ಔಟ್ ಆಗದೇ ಲೀಸ್ಟ್ ಎ ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ವಿಶ್ವ ದಾಖಲೆಯನ್ನು ಸಹ ಇವರು ನಿರ್ಮಿಸಿದ್ದರು. ಹೀಗಾಗಿ ಇವರು ಸಹ ಭಾರತ ತಂಡವನ್ನು ಸೇರುವ ಕನಸು ಕಾಣುತ್ತಿದ್ದಾರೆ.