
ಮಯಾಂಕ್ ಅಗರ್ವಾಲ್ ಈ ಬಾರಿಯ ಐಪಿಎಲ್‌ನಲ್ಲಿ ಭರ್ಜರಿ ಲಯದಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅಬ್ಬರದ ಶತಕವನ್ನು ದಾಖಲಿಸಿದ್ದಾರೆ. ಈ ಮೂಲಕ ತನ್ನ ಭರ್ಜರಿ ಫಾರ್ಮ್‌ಅನ್ನು ಮೂರನೇ ಪಂದ್ಯದಲ್ಲೂ ಮುಂದುವರಿಸಿದ್ದಾರೆ. 50 ಎಸೆತಗಳನ್ನು ಎದುರಿಸಿದ ಅಗರ್ವಾಲ್ 106 ರನ್‌ಗಳನ್ನು ಬಾರಿಸಿ ಮಿಂಚಿದರು.
ಮಯಾಂಕ್ ಅಗರ್ವಾಲ್ ಈ ಐಪಿಎಲ್ ಆವೃತ್ತಿಯ ತಮ್ಮ ಮೊದಲ ಪಂದ್ಯದಲ್ಲೂ ಸ್ಪೋಟಕ ಅರ್ಧ ಶತಕವನ್ನು ಬಾರಿಸಿ ಡೆಲ್ಲಿ ವಿರುದ್ಧ ಗೆಲ್ಲುವ ಹಂತಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದರು. ಈ ಮಧ್ಯೆ ಆರ್‌ಸಿಬಿ ವಿರುದ್ಧ ಎಡವಿ ಬೇಗನೆ ವಿಕೆಟ್ ಒಪ್ಪಿಸಿದರಾದರೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮತ್ತೆ ಭರ್ಜರಿ ಫಾರ್ಮ್ ಮುಂದುವರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ತನ್ನ ಅದ್ಭುತ ಪ್ರದರ್ಶನದ ಬಗ್ಗೆ ಮಯಾಂಕ್ ಅಗರ್ವಾಲ್ ಕಾರಣವನ್ನು ಹೇಳಿದ್ದಾರೆ. ಈ ಹಿಂದಿನ ಐಪಿಎಲ್ ಆವೃತ್ತಿಗಳಿಗಿಂತ ನಾನು ಈ ಬಾರಿ ನನ್ನ ಮೇಲೆ ಹೆಚ್ಚಿನ ಭರವಸೆಯನ್ನು ಹೊಂದಿದ್ದು ಹೆಚ್ಚು ಶಾಂತಚಿತ್ತವನ್ನ ಹೊಂದಿದ್ದೇನೆ. ಈ ಹಿಂದಿನ ಐಪಿಎಲ್‌ಗೆ ಹೋಲಿಸಿದರೆ ನಾನು ನನಗಾಗಿ ಹೆಚ್ಚಿನ ಸಮಯಾವಕಾಶವನ್ನು ನೀಡಿದ್ದೇನೆ ಎಂದು ಮಯಾಂಕ್ ಅಗರ್ವಾಲ್ ಹೇಳಿದ್ದಾರೆ.
ನಾನು ನೆಟ್‌ನಲ್ಲಿ ಸಾಕಷ್ಟು ಪರಿಶ್ರಮವನ್ನು ಹಾಕಿದ್ದೇನೆ. ಹೀಗಾಗಿ ನಾನು ಹೆಚ್ಚಿನ ಆತ್ಮವಿಶ್ವಾಸವನ್ನು ಗಳಿಸಿಕೊಂಡಿದ್ದೇನೆ ಎಂದು ಮಯಾಂಕ್ ಅಗರ್ವಾಲ್ ತಮ್ಮ ಯಶಸ್ಸಿನ ವಿಚಾರವಾಗಿ ಹೇಳಿಕೆಯನ್ನು ನೀಡಿದ್ದಾರೆ. ಮುಂದಿನ ಪಂದ್ಯಗಳಲ್ಲು ಮಿಂಚುವ ಭರವಸೆಯನ್ನು ನೀಡಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್‌ಸನ್ ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದೊಂದು ಶ್ರೇಷ್ಠವಾದ ಇನ್ನಿಂಗ್ಸ್ ಆಗಿತ್ತು ಎಂದು ಪೀಟರ್‌ಸನ್ ಬಣ್ಣಿಸಿದ್ದಾರೆ. ಜೊತೆಗೆ ಅದ್ಭುತ ಲಯದಲ್ಲಿದ್ದ ಮಯಾಂಕ್‌ಗೆ ಹೆಚ್ಚು ಸ್ಟ್ರೈಕ್ ಬಿಟ್ಟುಕೊಟ್ಟ ನಾಯಕ ಕೆಎಲ್ ರಾಹುಲ್ ಬಗ್ಗೆಯೂ ಪೀಟರ್ಸನ್ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.