ನಾಯಕ ಮಯಾಂಕ್ ಅಗರ್‌ವಾಲ್ ಅವರ ಶತಕ ಹಾಗೂ ಭರವಸೆಯ ಆಟಗಾರ ಮನೀಷ್ ಪಾಂಡೆ ಅವರ ಅರ್ಧಶತಕದ ನೆರವಿನಿಂದ ಕರ್ನಾಟಕ ರಣಜಿ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ಬಿಹಾರ್ ವಿರುದ್ಧ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಉಭಯ ತಂಡಗಳ ನಡುವಣ ಎರಡನೇ ದಿನದಾಟಕ್ಕೆ ಮಳೆ ಅಡ್ಡಿ ಪಡಿಸಿತ್ತು. ಹೀಗಾಗಿ ಸೋಮವಾರ ಮೂರನೇ ದಿನದಾಟದವನ್ನು ವಿಕೆಟ್ ನಷ್ಟವಿಲ್ಲದೆ 16 ರನ್‌ಗಳಿಂದ ಆಟ ಮುಂದುವರಿಸಿ 7 ವಿಕೆಟ್ 287 ರನ್‌ಗಳನ್ನು ಗಳಿಸಿದೆ. ಈ ಮೂಲಕ ಮಯಾಂಕ್ ಪಡೆ 144 ರನ್‌ಗಳ ಮುನ್ನಡೆ ಸಾಧಿಸಿತು.

ಕರ್ನಾಟಕ ತಂಡದ ಭರವಸೆಯ ಆಟಗರರು ಜವಾಬ್ದಾರಿ ಮರೆತರು. ನಿಕಿನ್ ಜೋಸ್ ಹಾಗೂ ಸುಜಯ್ ಸತಾರಿ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ಗೆ ನಾಯಕ ಮಯಾಂಕ್ ಅಗರ್‌ವಾಲ್ ಹಾಗೂ ಆರ್ ಸ್ಮರಣ್ ಜೋಡಿ ಸಮಯೋಚಿತ ಆಟದ ಪ್ರದರ್ಶನ ನೀಡಿತು. ಈ ಜೋಡಿ ಎದುರಾಳಿ ಬೌಲರ್‌ಗಳ ತಂತ್ರವನ್ನು ಅರಿತು ಬ್ಯಾಟ್ ಮಾಡಿತು. ಪರಿಣಾಮ ಸರಾಗವಾಗಿ ರನ್ ಕಲೆ ಹಾಕಿ ಅಬ್ಬರಿಸಿತು. ಸುಮಾರು 17 ವಿಕೆಟ್ ಬೀಳದಂತೆ ಕಾಯ್ದುಕೊಂಡ ಜೋಡಿ 80 ರನ್ ಸೇರಿಸಿದರು.
ಇತ್ತೀಚಿಗೆ ನಡೆದ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರಿಸಿದ ಸ್ಮರಣ್ ಮಹತ್ವದ ಸಮಯದಲ್ಲಿ ಜವಾಬ್ದಾರಿ ಮರೆತರು. 4 ಬೌಂಡರಿ ನೆರವಿನಿಂದ 37 ರನ್ ಬಾರಿಸಿ ಔಟ್ ಅದರು.
ಕರ್ನಾಟಕದ ಸ್ಟಾರ್ ಆಟಗಾರ ಮಯಾಂಕ್ ಅಗರ್‌ವಾಲ್ ಹಾಗೂ ಮನೀಷ್ ಪಾಂಡೆ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ತಮ್ಮ ಅನುಭವದ ಲಾಭ ಪಡೆದು ಬ್ಯಾಟ್ ಮಾಡಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಬಿಹಾರ ಬೌಲರ್ಸ್ ವಿಫಲರಾದರು. ಈ ಜೋಡಿ ಸುಮಾರು 16 ಓವರ್ ಬ್ಯಾಟಿಂಗ್ ನಡೆಸಿ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 56 ರನ್ ಬಾರಿಸಿದ್ದ ಮನೀಷ್ ತಾಳ್ಮೆ ಕಳೆದುಕೊಂಡರು. ಪರಿಣಾಮ ಔಟ್ ಆದರು.
ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿರುವ ಅಭಿನವ್ ಮನೋಹರ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 37 ರನ್ ಸಿಡಿಸಿ ಔಟ್ ಆದರು.
ಭರವಸೆಯ ಆಟಗಾರ ಮಯಾಂಕ್ ಅಗರ್‌ವಾಲ್ ಕ್ಲಾಸಿಕ್ ಆಟದ ಪ್ರದರ್ಶನ ನೀಡಿದರು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇವರನ್ನು ಪರಿಗಣಿಸದೇ ಇರುವುದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದಂತೆ ಅಬ್ಬರಿಸಿದ ಅಗರ್‌ವಾಲ್ ಶತಕ ಬಾರಿಸಿದರು. ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ ಮಯಾಂಕ್ 12 ಬೌಂಡರಿ ನೆರವಿನಿಂದ 105 ರನ್ ಸಿಡಿಸಿ ಔಟ್ ಆದರು.
ಬಿಹಾರ ಪರ ಹಿಮಾಂನ್ಶು ಸಿಂಗ್ 51 ರನ್ ನೀಡಿ 4 ವಿಕೆಟ್ ಪಡೆದರು. ಇನ್ನು ಶಕೀಬ್ ಹುಸೇನ್ 86 ರನ್ ನೀಡಿ 2 ವಿಕೆಟ್ ಪಡೆದರು.