ಅಹಮದಾಬಾದ್: ನಾಯಕ ಮಯಾಂಕ್ ಅಗರ್‌ವಾಲ್ (132 ರನ್) ಹಾಗೂ ದೇವದತ್ ಪಡಿಕ್ಕಲ್ (113 ರನ್) ಇವರುಗಳ ಶತಕದ ನೆರವಿನಿಂದ ಕರ್ನಾಟಕ ವಿಜಯ್ ಹಜಾರೆ ಏಕದಿನ ಸರಣಿಯ ಎಲೈಟ್ ಎ ಗುಂಪಿನಲ್ಲಿ 67 ರನ್‌ಗಳಿಂದ ಪುದುಚೇರಿ ತಂಡವನ್ನು ಮಣಿಸಿ, ಅಜೇಯ ಓಟವನ್ನು ಮುಂದುವರೆಸಿದೆ. ಕರ್ನಾಟಕ ಟೂರ್ನಿಯಲ್ಲಿ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದು 16 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ಕರ್ನಾಟಕದ ಸ್ಟಾರ್ ಆರಂಭಿಕ ಆಟಗಾರರಾದ ನಾಯಕ ಮಯಾಂಕ್ ಅಗರ್‌ವಾಲ್ ಹಾಗೂ ದೇವದತ್ ಪಡಿಕ್ಕಲ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಪವರ್ ಪ್ಲೇನಲ್ಲಿ ಅಮೋಘ ಜೊತೆಯಾಟವನ್ನು ನೀಡಿತು. ಈ ಜೋಡಿಯನ್ನು ಕಟ್ಟಿಹಾಕುವಲ್ಲಿ ಪುದುಚೇರಿ ವಿಫಲವಾಯಿತು. ಈ ಜೋಡಿ ಮೊದಲ ವಿಕೆಟ್‌ಗೆ 37.5 ಓವರ್‌ಗಳಲ್ಲಿ 1 ವಿಕೆಟ್‌ಗೆ 228 ರನ್ ಸೇರಿಸಿತು. ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ದೇವದತ್ ಪಡಿಕ್ಕಲ್ 116 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್ ಸಹಾಯದಿಂದ 113 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.

ನಾಯಕ ಮಯಾಂಕ್ ಅಗರ್‌ವಾಲ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಇವರು 124 ಎಸೆತಗಳಲ್ಲಿ 15 ಬೌಂಡರಿ, 2 ಸಿಕ್ಸರ್ ನೆರವಿನಿಂದ 132 ರನ್ ಸಿಡಿಸಿ ಔಟ್ ಆದರು. ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ಕರುಣ್ ನಾಯರ್ 182.35ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದರು. ಇವರು 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 62 ರನ್ ಬಾರಿಸಿ ಮಿಂಚಿದರು. ಆರ್ ಸ್ಮರಣ್ 21 ರನ್ ಬಾರಿಸಿದರು. ಅಭಿನವ್ ಮನೋಹರ್ ಕೇವಲ 6 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 21 ರನ್ ಸಿಡಿಸಿದರು. ಅಂತಿಮವಾಗಿ ಕರ್ನಾಟಕ 50 ಓವರ್‌ಗಳಲ್ಲಿ 4 ವಿಕೆಟ್‌ಗೆ 363 ರನ್ ಕಲೆ ಹಾಕಿತು.
364 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪುದುಚೇರಿ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ನಯನ್ ಶ್ಯಾಮ್ ಕಂಗಾಯನ್ ಮತ್ತು ಅಜಯ್ ರೋಹೆರಾ ಜೋಡಿ ಮೊದಲ ವಿಕೆಟ್‌ಗೆ 13.6 ಓವರ್‌ಗಳಲ್ಲಿ 78 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಅಜಯ್ ರೋಹೆರಾ 41 ಎಸೆತಗಳಲ್ಲಿ 32 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಮೋಹಿತ್ ಕಾಳೆ (22), ನಾಯಕ ಅಮನ್ ಖಾನ್ (34), ಮಾರಿಮುತ್ತು ವಿಕ್ನೇಶ್ವರನ್ 31 ರನ್ ಬಾರಿಸಿದರು. ಆಲ್‌ರೌಂಡರ್ ಜಯಂತ್ ಯಾದವ್ 35 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 54 ರನ್ ಬಾರಿಸಿದರು. ಅಂತಿಮವಾಗಿ ಪುದುಚೇರಿ 50 ಓವರ್‌ಗಳಲ್ಲಿ 296 ರನ್‌ಗಳಿಗೆ ಆಲೌಟ್ ಆಯಿತು. ಕರ್ನಾಟಕದ ಪರ ಮನ್ವಂತ್ ಕುಮಾರ್ 3, ವಿದ್ವತ್ ಕಾವೇರಪ್ಪ, ಕರುಣ್ ನಾಯರ್ ತಲಾ 2 ವಿಕೆಟ್ ಉರುಳಿಸಿದರು.