ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವಣ ಮೊದಲ ಟಿ20 ಪಂದ್ಯ ಗ್ವಾಲಿಯರ್‌ನಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಗೆಲುವು ಸಾಧಿಸಿ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಇಬ್ಬರು ಪದಾರ್ಪಣೆ ಮಾಡುವ ಅವಕಾಶ ಪಡೆದರು. ಅದರಲ್ಲಿ ಎಲ್ಲರ ಚಿತ್ತ ಕದ್ದ ಪ್ಲೇಯರ್ ವೇಗಿ ಮಯಾಂಕ್ ಯಾದವ್.
ಟೀಮ್ ಇಂಡಿಯಾ ಪರ ಮಯಾಂಕ್ ಯಾದವ್ ಆಡುವ ಅವಕಾಶವನ್ನು ಪಡೆದರು. ಅಲ್ಲದೆ ತಾವು ಎಸೆದ ಮೊದಲ ಓವರ್ ಮೆಡನ್ ಮಾಡಿ ಅಬ್ಬರಿಸಿದರು. ಈ ರೀತಿ ಪದಾರ್ಪಣೆ ಪಂದ್ಯದಲ್ಲಿ ಮೊದಲ ಓವರ್ ಮೆಡನ್ ಮಾಡಿದ ಭಾರತದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಮಯಾಂಕ್ ಪಾತ್ರರಾದರು. ಈ ಪಂದ್ಯದಲ್ಲಿ ಮಯಾಂಕ್ ಒಂದು ವಿಕೆಟ್ ಸಹ ಪಡೆದರು. ಮಯಾಂಕ್ ಅವರಿಗಿಂತ ಮುಂಚೆ ತಮ್ಮ ಬಿಗುವಿನ ವೇಗದ ದಾಳಿಯಿಂದಲೇ ಹಸರುವಾಸಿ ಆಗಿ ಭಾರತ ತಂಡ ಸೇರಿದ್ದ ಬೌಲರ್ ಉಮ್ರಾನ್ ಮಲಿಕ್.

ಉಮ್ರಾನ್ ಮಲಿಕ್ ಟೀಮ್ ಇಂಡಿಯಾದ ಭವಿಷ್ಯದ ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇಂದು ಅವರು ತಂಡದಲ್ಲಿ ಸ್ಥಾನ ಪಡೆಯಲು ಪರದಾಟ ನಡೆಸಿದ್ದಾರೆ. ಉಮ್ರಾನ್ ಸಹ ಗಂಟೆಗೆ 156 ಕಿಮೀ ವೇಗದಲ್ಲಿ ಚೆಂಡನ್ನು ಬೌಲ್ ಮಾಡುವ ಬೌಲರ್. ಆದರೆ ಇಂದು ಅವರು ತಂಡದಿಂದ ಹೊರಗುಳಿದಿದ್ದಾರೆ. ಈ ವರದಿಯಲ್ಲಿ ಮಯಾಂಕ್ ಹಾಗೂ ಉಮ್ರಾನ್ ನಡುವೆ ಕೆಲವು ಹೋಲಿಕೆಗಳನ್ನು ಮಾಡಲಾಗಿದೆ.
ಜಮ್ಮು-ಕಾಶ್ಮೀರ್‌ದ 24 ವರ್ಷದ ಬಲಗೈ ವೇಗಿ ಉಮ್ರಾನ್ ಮಲಿಕ್. ಉಮ್ರಾನ್ ಮಲಿಕ್ ತನ್ನ ಬಿರುಸಿನ ವೇಗದಿಂದ ಖ್ಯಾತಿ ಪಡೆದ ಆಟಗಾರ. ಐಪಿಎಲ್ 2022 ರಲ್ಲಿ ಅವರು ಗಂಟೆಗೆ 150 ಕಿಮೀ ವೇಗದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡಿ ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆದರು. ಇವರು ಐಪಿಎಲ್‌ನಲ್ಲಿ ಬಿಗುವಿನ ದಾಳಿ ನಡೆಸಿ ಎಲ್ಲರ ಗಮನ ಸೆಳೆದರು. ಬಳಿಕ ಇವರಿಗೆ ತಂಡದಲ್ಲಿ ಸ್ಥಾನ ನೀಡಲಾಯಿತು. ಭಾರತದ ಪರ ಉಮ್ರಾನ್ 10 ಏಕದಿನ, 8 ಟಿ20 ಪಂದ್ಯಗಳನ್ನು ಆಡಿದ್ದು, ಒಟ್ಟು 24 ವಿಕೆಟ್ ಕಬಳಿಸಿದ್ದಾರೆ.
ಪ್ರತಿಯೊಬ್ಬ ಬೌಲರ್‌ನಂತೆ ಉಮ್ರಾನ್ ಮಲಿಕ್ ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇವರ ವೇಗಕ್ಕೆ ಬ್ಯಾಟರ್‌ಗಳು ಕಂಗಾಲಾಗುತ್ತಾರೆ. ಆದರೆ ಇವರ ಲೈನ್ ಹಾಗೂ ಲೆಂಥ್ ಮೇಲೆ ಯಾವುದೇ ನಿಯಂತ್ರಣ ಇಲ್ಲ ಹೀಗಾಗಿ ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡಿದ್ದಾರೆ.

ಮಯಾಂಕ್ ಯಾದವ್ ಸಹ ಉಮ್ರಾನ್ ಮಲಿಕ್‌ರಂತೆ ಬಲಗೈ ವೇಗಿ. 22 ವರ್ಷದ ಮಯಾಂಕ್ ಸತತವಾಗಿ 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಕ್ಷಮತೆ ಹೊಂದಿದ್ದಾರೆ. ಬಾಂಗ್ಲಾ ವಿರುದ್ಧದದ ಪಂದ್ಯದಲ್ಲಿ ಮಯಾಂಕ್ ಅಬ್ಬರಿಸಿದ್ದರು. ದೆಹಲಿ ಪರ ದೇಶೀಯ ಟೂರ್ನಿಗಳನ್ನು ಆಡುವ ಮಯಾಂಕ್ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡುವ ಸ್ಟಾರ್ ವೇಗಿ. ಕಳೆದ ಆವೃತ್ತಿಯ ಆರಂಭಿಕ ಪಂದ್ಯಗಳಲ್ಲಿ ಕಾಣಿಸಿಕೊಂಡ ಬಳಿಕ ಅವರು ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿಯಬೇಕಾಯಿತು. ಇವರು ಸ್ವಿಂಗ್ ಮತ್ತು ಸೀಮ್ ಮೂಮೆಂಟ್‌ಗಳ ಮೇಲೆ ಒತ್ತು ನೀಡುತ್ತಾರೆ. ಇವರಿಗೂ ಗಾಯ ಬಹುವಾಗಿ ಕಾಡಿದೆ.