
ಆಸ್ಟ್ರೇಲಿಯಾದ ದಿಗ್ಗಜ ಶೇನ್ ವಾರ್ನ್ ಅವರ ಬೌಲಿಂಗ್ ಶೈಲಿಯನ್ನು ಟಿವಿಯಲ್ಲಿ ನೋಡುತ್ತಾ ಲೆಗ್ ಸ್ಪಿನ್ನಿಂಗ್ ಕಲೆ ಕಲಿತಿರುವ ಯುವ ಲೆಗ್ ಸ್ಪಿನ್ನರ್ ಖ್ರಿವಿತ್ಸೊ ಕೆನ್ಸೆ ಅವರು ಈ ಬಾರಿ ಐಪಿಎಲ್ ಹರಾಜು ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 16 ವರ್ಷ ವಯಸ್ಸಿನ ಕೆನ್ಸೆ ಅವರು ಐಪಿಎಲ್ ಹೊತ್ತಿಗೆ(ಮಾರ್ಚ್ 6) 17 ವರ್ಷಕ್ಕೆ ಕಾಲಿರಿಸಲಿದ್ದಾರೆ.
ಯಾವುದೇ ವಿಧಿವತ್ತಾದ ತರಬೇತಿ ಪಡೆಯದ ಕೆನ್ಸೆ ಫೆ. 18ರಂದು ಐಪಿಎಲ್ ಹರಾಜು ಎದುರು ನೋಡುತ್ತಿದ್ದಾರೆ. ನಾಗಾಲ್ಯಾಂಡಿನ ದಿಮಾಪುರ್ ಬಳಿಯ ಸೊವಿಮಾ ಗ್ರಾಮದ ಕಾರ್ಪೆಂಟರ್ ರೊಬ್ಬರ ಏಳು ಮಕ್ಕಳ ಪೈಕಿ ಐದನೇ ಪುತ್ರರಾಗಿ ಕೆನ್ಸೆ ಸ್ಥಳೀಯ ಹೀರೊ ಎನಿಸಿಕೊಂಡಿದ್ದಾರೆ.
ಐಪಿಎಲ್ 2021 ಹರಾಜಿಗೆ ನೋಂದಾಯಿಸಿಕೊಂಡಿರುವ ಕೆನ್ಸೆ ಅವರ ಮೂಲ ಬೆಲೆ 20 ಲಕ್ಷ ರು ಎಂದು ನಿಗದಿ ಪಡಿಸಲಾಗಿದೆ. ಮೂಲಗಳ ಪ್ರಕಾರ ಕೆನ್ಸೆ ಮೇಲೆ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಕಣ್ಣಿರಿಸಿವೆ.
ಸ್ಪಿನ್ ಕಲಿಕೆ ಬಗ್ಗೆ ಕೆನ್ಸೆ:
"ನಾನು ಮೊದಲಿಗೆ ಆಫ್ ಸ್ಪಿನ್ನಿಂಗ್ ಮಾಡುತ್ತಿದ್ದೆ, ನನ್ನ ಬೆರಳುಗಳಲ್ಲಿ ನೋವುಂಟಾಯಿತು. ನಂತರ ಲೆಗ್ ಸ್ಪಿನ್ ಮಾಡಲು ಆರಂಭಿಸಿದೆ. ನಾನು ಕೋಚ್ ಯಾರು ಸಿಗದ ಕಾರಣ, ಟಿವಿಯಲ್ಲಿ ಶೇನ್ ವಾರ್ನ್ ಬೌಲಿಂಗ್ ಶೈಲಿ ನೋಡಿ ಕಲಿತೆ ಎಂದಿದ್ದಾರೆ.
ಫೆ.18ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಆಡಲು ಚೆನ್ನೈಗೆ ಬಂದಿರುವ ಕೆನ್ಸೆ ಅವರು ವಾರ್ನ್ ಅವರು ಚೆಂಡನ್ನು ತಿರುಗಿಸುವ ರೀತಿ ಅಚ್ಚರಿಗೊಂಡೆ, ಸತತ ಪ್ರಯತ್ನದಿಂದ ಲೆಗ್ ಸ್ಪಿನ್ನರ್ ಆಗಿ ರೂಪುಗೊಂಡೆ. ಅಂಡರ್ 16 ಆಡುವ ವೇಳೆ ಕೋಚ್ ಸಿಕ್ಕಿದ್ದರೂ ಲೆಗ್ ಸ್ಪಿನ್ ಕೋಚ್ ಯಾರು ಸಿಗಲಿಲ್ಲ ಎಂದಿದ್ದಾರೆ.
2018-19ರಲ್ಲಿ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಉತ್ತರಪ್ರದೇಶ ವಿರುದ್ಧ 5 ವಿಕೆಟ್ ಗಳಿಸಿದ ಕೆನ್ಸೆ ಬಗ್ಗೆ ಕೋಚ್ ಕನ್ವಲ್ಜಿತ್ ಸಿಂಗ್ ಅವರು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಿಜೋರಾಂ ವಿರುದ್ಧ 16 ರನ್ನಿತ್ತು 3 ವಿಕೆಟ್ ಗಳಿಸಿದರೂ 4 ಪಂದ್ಯಗಳಲ್ಲಿ 7 ವಿಕೆಟ್ ಮಾತ್ರ ಗಳಿಸಲು ಸಾಧ್ಯವಾಯಿತು.
ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಹಾಗೂ ರಾಜಸ್ಥಾನ ಟ್ರಯಲ್ಸ್ ನಲ್ಲಿ ಈ ಆರಡಿ ಎತ್ತರದ ಬೌಲರ್ ಆಡಿದ್ದಾರೆ. ಸನ್ ರೈಸರ್ ಹೈದಾರಾಬಾದ್ ತಂಡದ ರಶೀದ್ ಖಾನ್ ಮೆಚ್ಚುವ ಕೆನ್ಸೆ ಅವರಂತೆ ಗೂಗ್ಲಿ ಎಸೆಯಬೇಕು ಎಂಬ ಬಯಕೆ ಹೊಂದಿದ್ದಾರೆ.