ಚಿತ್ತಗಾಂಗ್‌ನಲ್ಲಿ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವಣ ಎರಡನೇ ಟೆಸ್ಟ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ಸ್ಥಿರ ಪ್ರದರ್ಶನವನ್ನು ನೀಡಿ ಇನಿಂಗ್ಸ್ ಹಾಗೂ 106 ರನ್‌ಗಳ ಜಯ ದಾಖಲಿಸಿತು. ಈ ಮೂಲಕ ಬಾಂಗ್ಲಾದೇಶ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಿದೆ. ಮೊದಲ ಟೆಸ್ಟ್ ಪಂದ್ಯವನ್ನು ಜಿಂಬಾಬ್ವೆ ಗೆದ್ದು ಬೀಗಿತ್ತು. ಎರಡನೇ ಟೆಸ್ಟ್ ಬಾಂಗ್ಲಾ ಪಾಲಾಗಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವಲ್ಲಿ ಬಾಂಗ್ಲಾ ಪ್ಲೇಯರ್ ಪ್ರಮುಖ ಪಾತ್ರವನ್ನು ವಹಿಸಿದರು.
ಎರಡನೇ ಟೆಸ್ಟ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ಮೊದಲ ಇನಿಂಗ್ಸ್‌ನಲ್ಲಿ 227 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬಾಂಗ್ಲಾ ಮೊದಲ ಇನಿಂಗ್ಸ್‌ನಲ್ಲಿ 444 ರನ್‌ಗಳಿಗೆ ಆಲೌಟ್ ಆಯಿತು. ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಜಿಂಬಾಬ್ವೆ 111 ರನ್‌ಗಳಿಗೆ ಸರ್ವಪತನ ಕಂಡಿತು. ಈ ವೇಳೆ ಬಾಂಗ್ಲಾ ಆಲ್‌ರೌಂಡರ್ ಮೆಹದಿ ಹಸನ್ ಮಿರ್ಜಾ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದರು.

ಬಾಂಗ್ಲಾದೇಶದ ಪರ ಮೊಹದಿ ಹಸನ್ ಮಿರ್ಜಾ ಬ್ಯಾಟಿಂಗ್ ವೇಳೆ ಶತಕ ಬಾರಿಸಿದರು. ಇವರು 162 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ 104 ರನ್ ಬಾರಿಸಿದರು. ಇವರ ಹಾಗೂ ಆರಂಭಿಕ ಆಟಗಾರ ಸದ್ಮನ್ ಇಸ್ಲಾಂ ಅವರ ಶತಕದ ನೆರವಿನಿಂದ ಬಾಂಗ್ಲಾ ಉತ್ತಮ ಮೊತ್ತವನ್ನು ಕಲೆ ಹಾಕಿತು. ಇನ್ನು ಜಿಂಬಾಬ್ವೆ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗಲೂ ಮೆಹದಿ ಹಸನ್ ಮಿರ್ಜಾ ಅಬ್ಬರಿಸಿದರು.
ಮೆಹದಿ ಹಸನ್ ಮಿರ್ಜಾ ಅಮೋಘ ದಾಳಿ ನಡೆಸಿ 21 ಓವರ್‌ಗಳಲ್ಲಿ 32 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ ಮೂಲಕ ಮೆಹದಿ ಹಸನ್ ಮಿರ್ಜಾ ಅಮೋಘ ಸಾಧನೆಯನ್ನು ಮಾಡಿದರು. ಒಂದೇ ಇನಿಂಗ್ಸ್‌ನಲ್ಲಿ ಶತಕ ಹಾಗೂ ಐದು ವಿಕೆಟ್ ಪಡೆದ ಮೂರನೇ ಬಾಗ್ಲಾದೇಶದ ಆಟಗಾರ ಎಂಬ ಖ್ಯಾತಿಗೆ ಇವರು ಪಾತ್ರರಾದರು.

ಬಾಂಗ್ಲಾದೇಶದ ಪರ ಈ ಸಾಧನೆಯನ್ನು ಶಕೀಬ್ ಅಲ್ ಹಸನ್ ಎರಡು ಬಾರಿ ಮಾಡಿದ್ದಾರೆ. ಇವರು 2011ರಲ್ಲಿ ಮೀರ್‌ಪೂರ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಈ ಸಾಧನೆಯನ್ನು ಮಾಡಿದ್ದರು. ಇನ್ನು 2014ರಲ್ಲಿ ಶಕೀಬ್ ಇದೇ ಸಾಧನೆಯನ್ನು ಜಿಂಬಾಬ್ವೆ ವಿರುದ್ಧವೂ ಮಾಡಿದ್ದರು. ಇನ್ನು ಸೊಹಾಗ್ ಗಾಜಿ ಸಹ ಇಂತಹದ್ದೇ ಸಾಧನೆಯನ್ನು ನ್ಯೂಜಿಲೆಂಡ್ ವಿರುದ್ಧ ಮಾಡಿ ಸೈ ಎನಿಸಿಕೊಂಡಿದ್ದರು.
27 ವರ್ಷದ ಮೆಹದಿ ಹಸನ್ ಮಿರ್ಜಾ ಈಗಾಗಲೇ ಬಾಂಗ್ಲಾ ಪರ 53 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 24ರ ಸರಾಸರಿಯಲ್ಲಿ 2068 ರನ್ ಕಲೆ ಹಾಕಿದ್ದಾರೆ. ಈ ವೇಳೆ 2 ಶತಕ ಹಾಗೂ 9 ಅರ್ಧಶತಕಗಳು ಸೇರಿವೆ. ಇನ್ನು ಬೌಲಿಂಗ್‌ನಲ್ಲಿ ಇವರು 205 ವಿಕೆಟ್ ಪಡೆದ ಹಿರಿಮೆ ಹೊಂದಿದ್ದಾರೆ.