MI vs LSG: ಗೆದ್ದವರ ಪ್ಲೇ ಆಫ್ ಆಸೆ ಜೀವಂತ, ಗೆಲುವಿನ ಒತ್ತಡದಲ್ಲಿ ಮುಂಬೈ
ಮುಂಬೈ: ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ (ಎಂಐ) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡಗಳು 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 47ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳೂ ಈ ಬಾರಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು ಗೆಲುವಿನ ಹುಡುಕಾಟ ನಡೆಸಿವೆ. ಉಭಯ ತಂಡಗಳಿಗೆ ಪ್ಲೇ ಆಫ್ ಪ್ರವೇಶಿಸಲು ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿವೆ.
ಎರಡೂ ತಂಡಗಳು ಈ ಬಾರಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿವೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಆಡಿದ 9 ಪಂದ್ಯಗಳಲ್ಲಿ 2 ಜಯ, 7 ಸೋಲು ಕಂಡಿದ್ದು 4 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ. ಇನ್ನು ಎಲ್‌ಎಸ್‌ಜಿ ಆಡಿದ 8 ಪಂದ್ಯಗಳಲ್ಲಿ 2 ಗೆಲುವು, 6 ಸೋಲು ಕಂಡಿದ್ದು, 4 ಅಂಕಗಳನ್ನು ಕಲೆ ಹಾಕಿ 10ನೇ ಸ್ಥಾನದಲ್ಲಿದೆ.

ಮುಂಬೈ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಆದರೆ ಆ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ತಂಡದ ಪರ ಯಾವೊಬ್ಬ ಬ್ಯಾಟರ್ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ನಮನ್ ಧೀರ್ (233 ರನ್) ಆರಂಭಿಕ ರಿಯಾನ್ ರಿಕಲ್ಟನ್ (297 ರನ್) ರನ್ ಕಲೆಹಾಕುತ್ತಿದ್ದು ಭರವಸೆ ಮೂಡಿಸಿದ್ದಾರೆ. ತಿಲಕ್ ವರ್ಮಾ (193 ರನ್), ಸೂರ್ಯಕುಮಾರ್ ಯಾದವ್ (183 ರನ್) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಮಿಂಚಬೇಕಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬೇಕಿದೆ.
ಮುಂಬೈ ತಂಡದ ಪರ ಸ್ಪಿನ್ ಬೌಲರ್ ಎ.ಎಂ. ಗಜನ್‌ಫರ್ (11 ವಿಕೆಟ್) ಬಿಗುವಿನ ದಾಳಿ ನಡೆಸಿ ತಂಡಕ್ಕೆ ಆಧಾರವಾಗಬೇಕಿದೆ. ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೋಲ್ಟ್, ಅಶ್ವನಿ ಕುಮಾರ್, ಶಾರ್ದೂಲ್ ಠಾಕೂರ್ ರನ್‌ಗಳಿಗೆ ಕಡಿವಾಣ ಹಾಕಿ ಅಬ್ಬರಿಸಬೇಕಿದೆ. ಹಾಗಾದಾಗ ಮಾತ್ರ ಎರಡು ಅಂಕದ ಕನಸು ನನಸಾಗುತ್ತದೆ.
ಒತ್ತಡದಲ್ಲಿ ಎಲ್‌ಎಸ್‌ಜಿ
ಎಲ್‌ಎಸ್‌ಜಿ ತಂಡದ ಪರ ಆರಂಭಿಕ ಮಿಚೆಲ್ ಮಾರ್ಷ್ (212 ರನ್) ಹಾಗೂ ಅನುಭವಿ ಏಡನ್ ಮಾರ್ಕ್ರಾಮ್ (193 ರನ್) ಸ್ಥಿರ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್, ಆಯುಷ್ ಬದೋನಿ, ಮುಕುಲ್ ಚೌಧರಿ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಅಂದಾಗ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.

ಎಲ್‌ಎಸ್‌ಜಿ ತಂಡದ ವೇಗದ ಬೌಲರ್‌ಗಳಾದ ಪ್ರಿನ್ಸ್ ಯಾದವ್, ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್, ಶಿಸ್ತುಬದ್ಧ ದಾಳಿ ಸಂಘಟಿಸುವ ಅನಿವಾರ್ಯತೆ ಇದೆ. ಅಂದಾಗ ಗೆಲುವಿನ ಕನಸು ಸಫಲವಾಗುತ್ತದೆ. ಸೋಮವಾರದ ಪಂದ್ಯದಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬುದೇ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications