MI vs RCB IPL 2024: ಬುಮ್ರಾ ಎದುರು ಮಂಕಾದ ಆರ್‌ಸಿಬಿಗೆ ಡಿಕೆ, ಫಾಫ್, ರಜತ್ ಆಸರೆ; ಮುಂಬೈಗೆ ಸವಾಲಿನ ಗುರಿ
ಗುರುವಾರ, ಏಪ್ರಿಲ್ 11ರಂದು ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 25ನೇ ರೋಚಕ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ (ಎಂಐ) ಎದುರು ಪ್ರವಾಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಸವಾಲಿನ ಮೊತ್ತ ಕಲೆಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ರಜತ್ ಪಾಟಿದಾರ್ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಅವರ ಅವರ ನಿರ್ಣಾಯಕ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್‌ಗಳನ್ನು ಗಳಿಸಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ 197 ರನ್‌ಗಳ ಗುರಿ ನೀಡಿದೆ.

ಆರ್‌ಸಿಬಿ ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ದೊಡ್ಡ ಆರಂಭ ನೀಡಲು ವಿಫಲರಾದರು. ಈ ಜೋಡಿ 2.3 ಓವರ್‌ಗಳಲ್ಲಿ ಕೇವಲ 14 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ 3 ರನ್ ಗಳಿಸಿ ಆಡುತ್ತಿದ್ದ ವಿರಾಟ್ ಕೊಹ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ಔಟಾದರು.
ನಂತರ ಬಂದ ಚೊಚ್ಚಲ ಆಟಗಾರ ವಿಲ್ ಜ್ಯಾಕ್ಸ್ ಎರಡು ಬೌಂಡರಿ ಬಾರಿಸಿ ಅಬ್ಬರದ ಮುನ್ಸೂಚನೆ ನೀಡಿದ್ದರು. ಆದರೆ ಕೇವಲ 8 ರನ್‌ಗಳಿಗೆ ತಮ್ಮ ಆಟ ಮುಗಿಸಿದರು. ಈ ವೇಳೆ ಫಾಫ್ ಡು ಪ್ಲೆಸಿಸ್ ಮತ್ತು ರಜತ್ ಪಾಟಿದಾರ್ ಜೊತೆಗೂಡಿದರು ಮತ್ತು ಸ್ಕೋರ್ ಬೋರ್ಡ್ ಹೆಚ್ಚಿಸಿದರು.

ರಜತ್ ಪಾಟಿದಾರ್ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಮೇತ 50 ರನ್ ಗಳಿಸಿ ವಿಕೆಟ್ ನೀಡಿದರು. ನಂತರ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಸೊನ್ನೆಗೆ ಔಟಾಗಿ ತಮ್ಮ ಹಳೆಯ ಚಾಳಿ ಮುಂದುವರೆಸಿದರು.
ಇನ್ನು ನಾಯಕ ಫಾಫ್ ಡು ಪ್ಲೆಸಿಸ್ 40 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಮೇತ 61 ರನ್ ಬಾರಿಸಿದರು. ಆ ಬಳಿಕ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಸೌರವ್ ಚೌಹಾಣ್ ಕೇವಲ 9 ರನ್ ಗಳಿಸಿ ಔಟಾದರು.

ಇನ್ನು ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ್ದು ಡಿಕೆ ಅಲಿಯಾಸ್ ದಿನೇಶ್ ಕಾರ್ತಿಕ್. ಆಕಾಶ್ ಮಧ್ವಲ್ ಅವರ ಎರಡು ಓವರ್‌ಗಳಲ್ಲಿ ಬೌಂಡರಿಗಳ ಮೇಲೆ ಬೌಂಡರಿ ಬಾರಿಸಿದರು. ಅಂತಿಮವಾಗಿ ಕೇವಲ 23 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಮೇತ ಅಜೇಯ 53 ರನ್ ಗಳಿಸಿದರು.

ಇನ್ನು ಬೌಲಿಂಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ದಾಳಿ ನಡೆಸಿದರು. ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 21 ರನ್ ನೀಡಿ 5 ವಿಕೆಟ್ ಕಬಳಿಸಿದರು. ಉಳಿದಂತೆ ಜೆರಾಲ್ಡ್ ಕೋಯಟ್ಜಿ, ಆಕಾಶ್ ಮಧ್ವಲ್ ಮತ್ತು ಶ್ರೇಯಸ್ ಗೋಪಾಲ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications