ಗುರುವಾರ, ಏಪ್ರಿಲ್ 11ರಂದು ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 25ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಮುಖಾಮುಖಿಯಾಗಲಿವೆ.
ಐಪಿಎಲ್ 2024ರಲ್ಲಿ ಆರ್‌ಸಿಬಿ ತಂಡದ ಹೀನಾಯ ಪ್ರದರ್ಶನಕ್ಕೆ ಬ್ಯಾಟಿಂಗ್ ವಿಭಾಗವೂ ಕಾರಣ. ವಿರಾಟ್ ಕೊಹ್ಲಿ ಹೊರತುಪಡಿಸಿ ಉಳಿದವರು ಕಳಪೆಯಾಗಿ ಔಟಾಗುತ್ತಿದ್ದಾರೆ. ವಿಶೇಷವಾಗಿ ವಿದೇಶಿ ಬ್ಯಾಟರ್‌ಗಳು ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವುದು ಆರ್‌ಸಿಬಿ ಚಿಂತೆ ಮಾಡಬೇಕಾದ ವಿಷಯವಾಗಿದೆ.

ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ತಂಡ ಗೆಲ್ಲಬೇಕಾದರೆ, ವಿದೇಶಿ ಬ್ಯಾಟರ್‌ಗಳಾದ ಫಾಫ್ ಡು ಪ್ಲೆಸಿಸ್, ಗ್ಲೆನ್ ಮಾಕ್ಸ್‌ವೆಲ್ ಮತ್ತು ಕ್ಯಾಮೆರಾನ್ ಗ್ರೀನ್ ಅಬ್ಬರದ ಬ್ಯಾಟಿಂಗ್ ಮಾಡಬೇಕಿದೆ. ಇನ್ನು ವಿಲ್ ಜ್ಯಾಕ್ಸ್ ಅವರನ್ನು ಆಡುವ 11ರ ಬಳಗಕ್ಕೆ ಕರೆತಂದರೆ ಉತ್ತಮ ಎನ್ನುವುದು ಹಲವರ ಅಭಿಪ್ರಾಯ.
ಇದೇ ವೇಳೆ ಆರ್‌ಸಿಬಿ ತಂಡದ ವೇಗಿ ರೀಸ್ ಟೋಪ್ಲಿ ಅವರು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ವಿದೇಶಿ ಬ್ಯಾಟರ್‌ಗಳು ತಮ್ಮ ಪ್ರಚಂಡ ಫಾರ್ಮ್‌ಗೆ ಹಿಂದಿರುಗಿ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಯಕ ಫಾಫ್ ಡು ಪ್ಲೆಸಿಸ್ ಸೇರಿದಂತೆ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕ್ಯಾಮೆರಾನ್ ಗ್ರೀನ್ ಈ ಮೂವರು ಕಳಪೆ ಬ್ಯಾಟಿಂಗ್ ಫಾರ್ಮ್ ಹೊಂದಿದ್ದರೂ, ಪ್ರಸಕ್ತ ಋತುವಿನಲ್ಲಿ ವಿರಾಟ್ ಕೊಹ್ಲಿ ಮಾತ್ರ ಆರ್‌ಸಿಬಿ ತಂಡಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಕಳೆದ ಐಪಿಎಲ್ ಋತುವಿನಲ್ಲಿ ಆಡಿದ 14 ಪಂದ್ಯಗಳಿಂದ 730 ರನ್‌ಗಳೊಂದಿಗೆ ಸಮೃದ್ಧವಾಗಿದ್ದ ನಾಯಕ ಫಾಫ್ ಡು ಪ್ಲೆಸಿಸ್, ಈ ಬಾರಿ ಈವರೆಗೆ ಆಡಿದ 5 ಪಂದ್ಯಗಳಿಂದ ಕೇವಲ 109 ರನ್ ಗಳಿಸಿದ್ದಾರೆ.
ಆಸೀಸ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟ್‌ನೊಂದಿಗೆ ದೊಡ್ಡ ಮೊತ್ತ ಗಳಿಸಲು ಹೆಣಗಾಡಿದ್ದಾರೆ ಮತ್ತು ಆಡಿದ 5 ಪಂದ್ಯಗಳಿಂದ ಕೇವಲ 32 ರನ್ ಗಳಿಸಿದ್ದಾರೆ. ಕ್ರೀಸ್‌ಗೆ ಬಂದ ವೇಗದಲ್ಲೇ ಪೆವಿಲಿಯನ್ ಸೇರುತ್ತಿದ್ದಾರೆ.
ಇನ್ನು ಮುಂಬೈ ಇಂಡಿಯನ್ಸ್‌ನಿಂದ ದೊಡ್ಡ ಮೊತ್ತಕ್ಕೆ ವ್ಯಾಪಾರಗೊಂಡ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್, ಬ್ಯಾಟಿಂಗ್ ಕ್ರಮಾಂಕದಲ್ಲಿ ಸ್ಥಿರ ಸ್ಥಾನವನ್ನು ಪಡೆಯಲು ಸಾಧ್ಯವಾಗಿಲ್ಲ. 3 ಮತ್ತು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರೂ ಪ್ರಭಾವಿ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆಸ್ಟ್ರೇಲಿಯಾ ಆಲ್‌ರೌಂಡರ್ ಈವರೆಗೆ ಕೇವಲ 68 ರನ್ ಗಳಿಸಿದ್ದಾರೆ.

ಐಪಿಎಲ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿರುವ ವಿರಾಟ್ ಕೊಹ್ಲಿ ಆಡಿದ 5 ಪಂದ್ಯಗಳಿಂದ 316 ಗಳಿಸಿದ್ದಾರೆ. ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧ ಮಹತ್ವದ ಪಂದ್ಯದಲ್ಲಿ ವಿದೇಶಿ ಬ್ಯಾಟರ್‌ಗಳು ಸಿಡಿದೇಳುವ ನಿರೀಕ್ಷೆ ಇದೆ.
ಐಪಿಎಲ್ 2024ರಲ್ಲಿ ಫೈನಲ್ ತಲುಪಲು ಇನ್ನೂ ಅವಕಾಶವಿದೆ: ರೀಸ್ ಟೋಪ್ಲಿ
ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ತಂಡದ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇಗಿ ರೀಸ್ ಟೋಪ್ಲಿ, ಆವೃತ್ತಿ ಇನ್ನೂ ಚಿಕ್ಕದಾಗಿ ಸಾಗಿದೆ ಮತ್ತು ಬ್ಯಾಟರ್‌ಗಳಿಗೆ ಪರಿಸ್ಥಿತಿಗಳನ್ನು ತಿರುಗಿಸಲು ಸಾಕಷ್ಟು ಸಮಯವಿದೆ ಎಂದು ಹೇಳಿದರು.
ಐಪಿಎಲ್ 2024ರ ಆರಂಭಕ್ಕೂ ಮುನ್ನ ಆರ್‌ಸಿಬಿ ಗುರಿಯು ಫೈನಲ್‌ಗೆ ಪ್ರವೇಶಿಸುವುದಾಗಿತ್ತು ಮತ್ತು ಅದನ್ನು ಸಾಧಿಸಲು ಇನ್ನೂ ಅವಕಾಶವಿದೆ ಎಂದು ರೀಸ್ ಟೋಪ್ಲಿ ಹೇಳಿದರು.
ಆರ್‌ಸಿಬಿ ತಂಡ ಐಪಿಎಲ್ 2024ರಲ್ಲಿ ಆಡಿದ 5 ಪಂದ್ಯಗಳಿಂದ ನಾಲ್ಕು ಸೋಲು ಮತ್ತು ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಸದ್ಯ 9ನೇ ಸ್ಥಾನದಲ್ಲಿದೆ.