ಸೋಮವಾರ, ಏಪ್ರಿಲ್ 1ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 14ನೇ ಪಂದ್ಯದಲ್ಲಿ ಅತಿಥೇಯ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡವು ಗೆಲುವಿನ ಕೇಕೆ ಹಾಕಿದೆ.
ತವರಿನಲ್ಲಿ ಆಡಿದರೂ ಗೆಲುವಿನ ಖಾತೆ ತೆರೆಯಲು ಮುಂಬೈ ಇಂಡಿಯನ್ಸ್ ತಂಡಕ್ಕೆ ಸಾಧ್ಯವಾಗಿಲ್ಲ. ಈ ಮೂಲಕ ಸತತ ಮೂರನೇ ಪಂದ್ಯವನ್ನು ಸೋತರೆ, ರಾಜಸ್ಥಾನ್ ರಾಯಲ್ಸ್ ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ ಯಾವುದೇ ಅರ್ಧಶತಕವಿಲ್ಲದೆ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 125 ರನ್‌ಗಳನ್ನು ಗಳಿಸಿತ್ತು.
126 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ರಿಯಾನ್ ಪರಾಗ್ ಅವರ ನಿರ್ಣಾಯಕ ಅರ್ಧಶತಕದ ನೆರವಿನಿಂದ 15.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿ 6 ವಿಕೆಟ್‌ಗಳ ಅಂತರದಿಂದ ಗೆಲುವಿನ ದಡ ಸೇರಿತು.
ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಅರಂಭ ನೀಡಲು ಸಾಧ್ಯವಾಗಲಿಲ್ಲ. ತಂಡದ ಮೊತ್ತ 10 ರನ್‌ಗಳಾಗಿದ್ದಾಗ ಅಷ್ಟೇ ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ವಿಕೆಟ್ ಒಪ್ಪಿಸಿದರು.

ಬಳಿಕ ಬಂದ ಸಂಜು ಸ್ಯಾಮ್ಸನ್ 12 ರನ್ ಗಳಿಸಿ ಔಟಾದರೆ, ಆರಂಭಿಕ ಜೋಸ್ ಬಟ್ಲರ್ 13 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಅನಂತರ ಕ್ರೀಸ್‌ಗೆ ಬಂದ ರಿಯಾನ್ ಪರಾಗ್ ತಂಡವನ್ನು ಗೆಲುವಿನ ಗಡಿ ಮುಟ್ಟಿಸಿದರು.
ರವಿಚಂದ್ರನ್ ಅಶ್ವಿನ್ 16 ರನ್ ಗಳಿಸಿ ರಿಯಾನ್ ಪರಾಗ್‌ಗೆ ಉತ್ತಮ ಸಾಥ್ ನೀಡಿದರು. ರಿಯಾನ್ ಪರಾಗ್ 39 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ ಅಜೇಯ 54 ರನ್ ಬಾರಿಸಿದರು. ಕೊನೆಯಲ್ಲಿ ಶುಭಂ ದುಬೆ ಅಜೇಯ 8 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಕಾಶ್ ಮಧ್ವಲ್ 4 ಓವರ್‌ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರೆ, ಕ್ವೆನಾ ಮಫಕಾ ಒಂದು ವಿಕೆಟ್ ಪಡೆದರು. ಸಾಧಾರಣ ಮೊತ್ತವನ್ನಿಉ ರಕ್ಷಿಸಿಕೊಳ್ಳುವಲ್ಲಿ ವಿಫಲರಾದರು.
ಇದಕ್ಕೂ ಮುನ್ನ ತವರಿನ ವಾಂಖೆಡೆ ಅಂಗಳಿದಲ್ಲಿ ಅಬ್ಬರಿಸಲು ಮುಂಬೈ ಇಂಡಿಯನ್ಸ್ ಬ್ಯಾಟರ್‌ಗಳು ವಿಫಲರಾದರು. ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳು ಗೋಲ್ಡನ್ ಡಕ್‌ಗೆ ಔಟಾದರು.
3.3 ಓವರ್‌ಗಳಲ್ಲಿ 20 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಾಜಿ ನಾಯಕ ರೋಹಿತ್ ಶರ್ಮಾ, ನಮನ ಧಿರ್ ಮತ್ತು ಡೆವಾಲ್ಡ್ ಬ್ರೆವಿಸ್ ಸೊನ್ನೆಗೆ ಔಟಾದರು. ಆರಂಭಿಕ ಇಶಾನ್ ಕಿಶನ್ ಅವರು 14 ಎಸೆತಗಳಲ್ಲಿ 16 ರನ್ ಗಳಿಸಿದರು.
ನಂತರ ಜೊತೆಗೂಡಿದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಕುಸಿದಿದ್ದ ತಂಡವನ್ನು ಮೇಲೆತ್ತಲು ಪ್ರಯತ್ನಿಸಿದರು. ಈ ಜೋಡಿ 5ನೇ ವಿಕೆಟ್‌ಗೆ 56 ರನ್‌ಗಳ ಜೊತೆಯಾಟ ನಿರ್ಮಿಸಿತು. ಹಾರ್ದಿಕ್ ಪಾಂಡ್ಯ 21 ಎಸೆತಗಳಲ್ಲಿ 6 ಬೌಂಡರಿ ಸಮೇತ 34 ರನ್ ಗಳಿಸಿದರು. ಇನ್ನು ತಿಲಕ್ ವರ್ಮಾ 29 ಎಸೆತಗಳಲ್ಲಿ 2 ಸಿಕ್ಸರ್‌ಗಳ ಸಮೇತ 32 ರನ್ ಬಾರಿಸಿದರು,
ಉಳಿದಂತೆ ಪಿಯೂಷ್ ಚಾವ್ಲಾ 3 ರನ್, ಟಿಮ್ ಡೇವಿಡ್ 17 ರನ್, ಜೆರಾಲ್ಡ್ ಕೊಯಟ್ಜಿ 4 ರನ್, ಜಸ್ಪ್ರೀತ್ ಬುಮ್ರಮಾ ಮತ್ತು ಆಕಾರ್ಶ ತಲಾ 4 ರನ್ ಗಳಿಸಿದರು.
ಇನ್ನು ಬೌಲಿಂಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಟ್ರೆಂಟ್ ಬೌಲ್ಟ್ 4 ಓವರ್‌ಗಳಲ್ಲಿ 11 ರನ್ ನೀಡಿ 3 ವಿಕೆಟ್ ಪಡೆದರೆ, ಯುಜ್ವೇಂದ್ರ ಚಹಾಲ್ 4 ಓವರ್‌ಗಳಲ್ಲಿ 11ರನ್ ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ನಾಂದ್ರೆ ಬರ್ಗರ್ 2 ವಿಕೆಟ್ ಮತ್ತು ಅವೇಶ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.