ಸೋಮವಾರ, ಏಪ್ರಿಲ್ 1ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 2024ರ ಲೀಗ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ.
ಎರಡು ಬಲಿಷ್ಠ ತಂಡಗಳ ನಡುವಿನ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 200ನೇ ಐಪಿಎಲ್ ಪ್ರದರ್ಶನದೊಂದಿಗೆ ಗಣ್ಯ ಆಟಗಾರರ ಪಟ್ಟಿಯನ್ನು ಸೇರಿಕೊಳ್ಳಲಿದ್ದಾರೆ.

ಲೆಜೆಂಡ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಸೋಮವಾರದಂದು ರಾಜಸ್ಥಾನ್ ರಾಯಲ್ಸ್ ಪರ ಆಡಿದರೆ ಮಹತ್ವದ ಐಪಿಎಲ್ ಮೈಲುಗಲ್ಲು ತಲುಪಲಿದ್ದಾರೆ.
ಈ ಋತುವಿನಲ್ಲಿ ಈಗಾಗಲೇ ರಾಜಸ್ಥಾನ್ ರಾಯಲ್ಸ್ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಆರ್ ಅಶ್ವಿನ್, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿದರೆ, ವೃತ್ತಿಜೀವನದಲ್ಲಿ 200 ಐಪಿಎಲ್ ಪಂದ್ಯಗಳನ್ನು ಆಡಿದ 10ನೇ ಆಟಗಾರನಾಗಲಿದ್ದಾರೆ.
37 ವರ್ಷದ ರವಿಚಂದ್ರನ್ ಅಶ್ವಿನ್ 2009ರಲ್ಲಿ ಸಿಎಸ್‌ಕೆ ತಂಡಕ್ಕಾಗಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು ಮತ್ತು ಈ ಟಿ20 ಕ್ರಿಕೆಟ್ ಲೀಗ್‌ನಲ್ಲಿ ಇದುವರೆಗೆ ಅಡಿದ 199 ಒಟ್ಟು ಪಂದ್ಯಗಳಲ್ಲಿ 743 ರನ್ ಗಳಿಸಿದ್ದು, 172 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರವಿಚಂದ್ರನ್ ಅಶ್ವಿನ್ ಸುದೀರ್ಘ ಹಾದಿಯನ್ನು ಹೊಂದಿದ್ದಾರೆ ಮತ್ತು ಸಾಧನೆ ಮಾಡಿದ ಇತಿಹಾಸವನ್ನು ಹೊಂದಿದ್ದಾರೆ. ಸದ್ಯಕ್ಕೆ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾರ್ವಕಾಲಿಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
2022ರ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಗೆ ಸೇರುವ ಮೊದಲು, ರವಿಚಂದ್ರನ್ ಅಶ್ವಿನ್ ಅವರು ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳಿಗೆ ಆಡಿದ್ದಾರೆ.
2010 ಮತ್ತು 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಎರಡು ಬಾರಿ ಐಪಿಎಲ್ ಚಾಂಪಿಯನ್‌ಶಿಪ್ ಗೆದ್ದರು. ಹೆಚ್ಚುವರಿಯಾಗಿ, ಅವರು 2018 ಮತ್ತು 2019ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಸೇವೆ ಸಲ್ಲಿಸಿ, ನಾಯಕತ್ವದ ಅನುಭವವನ್ನು ಪಡೆದರು.
ಸದ್ಯ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ರವಿಚಂದ್ರನ್ ಅಶ್ವಿನ್ 32 ಐಪಿಎಲ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. 27 ವಿಕೆಟ್‌ಗಳನ್ನು ಪಡೆದು, 287 ರನ್‌ಗಳನ್ನು ಗಳಿಸಿದ್ದಾರೆ.
ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್‌ನ ಕೊನೆಯ ಪಂದ್ಯದಲ್ಲಿ, ರವಿಚಂದ್ರನ್ ಅಶ್ವಿನ್ 5ನೇ ಸ್ಥಾನದಲ್ಲಿ ಬ್ಯಾಟ್ ಮಾಡಲು ಬಡ್ತಿ ಪಡೆದರು. 19 ಎಸೆತಗಳಲ್ಲಿ ಮೂರು ಸಿಕ್ಸರ್‌ಗಳ ಸಮೇತ 29 ರನ್ ಗಳಿಸಿದರು.
ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ 253 ಪಂದ್ಯಗಳನ್ನು ಆಡಿರುವ ಎಂಎಸ್ ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಅದರಲ್ಲಿ 223 ಪಂದ್ಯಗಳನ್ನು ಸಿಎಸ್‌ಕೆ ತಂಡಕ್ಕಾಗಿ ಆಡಿದ್ದಾರೆ. ಎಂಎಸ್ ಧೋನಿ ನಂತರದ ಸ್ಥಾನದಲ್ಲಿ ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಅವರು ತಲಾ 245 ಪಂದ್ಯಗಳೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 240 ಐಪಿಎಲ್ ಪಂದ್ಯಗಳನ್ನು ಆಡುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ. ಎಲ್ಲಾ ಪಂದ್ಯಗಳನ್ನು ಕೇವಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದಾರೆ.
ಉಳಿದಂತೆ ರವೀಂದ್ರ ಜಡೇಜಾ (229), ಶಿಖರ್ ಧವನ್ (220), ಸುರೇಶ್ ರೈನಾ (205), ರಾಬಿನ್ ಉತ್ತಪ್ಪ (205) ಮತ್ತು ಅಂಬಟಿ ರಾಯುಡು (204) ಕೂಡ ಐಪಿಎಲ್‌ನಲ್ಲಿ 200 ಪಂದ್ಯಗಳ ಗಡಿಯನ್ನು ದಾಟಿದ್ದಾರೆ.
ಇಲ್ಲಿಯವರೆಗೆ ಯಾವುದೇ ವಿದೇಶಿ ಆಟಗಾರ ಐಪಿಎಲ್‌ನಲ್ಲಿ 200 ಪಂದ್ಯಗಳನ್ನು ಆಡಿಲ್ಲ. ಸಾಗರೋತ್ತರ ಕ್ರಿಕೆಟಿಗನ ದಾಖಲೆಯು ಮುಂಬೈ ಇಂಡಿಯನ್ಸ್ ಮಾಜಿ ಆಟಗಾರ ಕೀರಾನ್ ಪೊಲಾರ್ಡ್ ಅವರ ಹೆಸರಿನಲ್ಲಿದೆ. ಅವರು 13 ಋತುಗಳಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ 189 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.