ಭಾರತದ ಭರವಸೆಯ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯ ಮೇಲೆ ಕಮಾಲ್ ಮಾಡಿದ್ದಾರೆ. ನಾರ್ವೆಯ ಫೋರ್ಡ್‌ನಲ್ಲಿ ನಡೆಯುತ್ತಿರುವ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಇವರು ಮಹಿಳೆಯರ 48 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸದ್ದಾರೆ. ಈ ಮೂಲಕ ಈ ಟೂರ್ನಿಯಲ್ಲಿ ಒಟ್ಟಾರೆ ಮೂರನೇ ಪದಕವನ್ನು ಗೆದ್ದು ಇತಿಹಾಸ ಬರೆದಿದ್ದಾರೆ.
ಮೀರಾಬಾಯಿ ಚಾನು 48 ಕೆಜಿ ವಿಭಾಗದಲ್ಲೊ ಇಟ್ಟು 199 ಕೆಜಿ ಭಾರವನ್ನು ಎತ್ತುವ ಮೂಲಕ ಎರಡನೇ ಸ್ಥಾನವನ್ನು ಪಡೆದರು. ಇವರು ಸ್ನ್ಯಾಚ್‌ನಲ್ಲಿ 84 ಕೆಜಿ ಎತ್ತಿದ್ದರೆ, ಕ್ಲೀನ್ ಆಂಡ್ ಜರ್ಕ್‌ನಲ್ಲಿ 115 ಕೆಹಿ ತೂಕ ಎತ್ತಿದರು. ಇದೇ ಸ್ಪರ್ಧೆಯಲ್ಲಿ ಉತ್ತರ ಕೊರಿಯಾದ ರಿ ಸಾಂಗ್ ಗಮ್ ಒಟ್ಟು 213 ಕೆಜಿ ತೂಕ ಎತ್ತುವ ಮೂಲಕ ಬಂಗಾರಕ್ಕೆ ಕೊರಳು ಒಡ್ಡಿದರು. ಒಟ್ಟಾರೆ ಟೂರ್ನಿಯಲ್ಲಿ ಮೀರಾಬಾಯಿ ಗೆದ್ದ ಮೂರನೇ ಪದಕ ಇದಾಗಿದೆ. ಇದಕ್ಕೂ ಮೊದಲು ಮೀರಾಬಾಯಿ 2017 ರಲ್ಲಿ ಅನಾಹೈಮ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, 2022 ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಚೀನಾದ ಥಾನ್ಯಥಾನ್ ಕಂಚಿನ ಪದಕ ಗೆದ್ದರು. ಇವರು ಸ್ನ್ಯಾಚ್ ವಿಭಾಗದಲ್ಲಿ ಮೀರಾಬಾಯಿ ಅವರಿಗಿಂತ 4 ಕೆಜಿ ಮುನ್ನಡೆ ಸಾಧಿಸಿದ್ದರು. ಆದರೆ ಕ್ಲೀನ್ ಆಂಡ್ ಜರ್ಕ್‌ನಲ್ಲಿ ಮೀರಾಬಾಯಿ ಸ್ಥಿರ ಪ್ರದರ್ಶನವನ್ನು ನೀಡಿ ಅಂತರವನ್ನು 1 ಕೆಜಿಗೆ ಹೆಚ್ಚಿಸಿಕೊಂಡರು. ಅಲ್ಲದೆ ತಮಗೆ ಬೆಳ್ಳಿ ಪದಕವನ್ನು ಖಚಿತ ಪಡಿಸಿಕೊಂಡರು.
ಮೀರಾಬಾಯಿ ಅವರ ಕ್ಲೀನ್ ಆಂಡ್ ಜರ್ಕ್‌ನ ಮೂರನೇ ಪ್ರಯತ್ನ ಮಾನ್ಯವಾಗುತ್ತಿದ್ದಂತೆ ಅವರ ಮುಖದಲ್ಲಿ ನಗು ಮೂಡಿತು. ಇವರು ಬಳಿಕ ನೇರವಾಗಿ ತಮ್ಮ ಕೋಚ್ ವಿಜಯ್ ಶರ್ಮಾ ಅವರ ಬಳಿಗೆ ಹೋಗಿ ಅವರಿಗೆ ಧನ್ಯವಾದ ಅರ್ಪಿಸಿದರು. ಗಾಯದಿಂದ ಬಳಲುತ್ತಿದ್ದ ಮೀರಾಬಾಯಿ, ಕಷ್ಟದ ದಿನಗಳನ್ನು ಮೆಟ್ಟಿನಿಂತು ಈ ಹಂತಕ್ಕೆ ಬಂದಿದ್ದಾರೆ. ಮೀರಾಬಾಯಿ ಈ ವರ್ಷ ಅಹಮದಾಬಾದ್‌ನಲ್ಲಿ ನಡೆದ ಕಾಮನ್‌ವೆಲ್ತ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ನಗೆ ಬೀರಿದ್ದರು.
ಮೀರಾಬಾಯಿ ಚಾನು ಅವರು 2020ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆಯನ್ನು ಮಾಡಿದ್ದರು. ಅಲ್ಲದೆ ಕಾಮನ್‌ವೆಲ್ತ್ ಗೇಮ್ಸ್, ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ಗಳಲ್ಲಿ ಅಮೋಘ ಪ್ರದರ್ಶನ ನೀಡಿ ಪದಕದ ಬೇಟೆಯನ್ನು ನಡೆಸಿದ್ದರು. ಇವರ ಸಾಧನೆ ಕೇಂದ್ರ ಸರ್ಕಾರ ಪದ್ಮಶ್ರೀ ಹಾಗೂ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಖೇಲ್ ರತ್ನ ನೀಡಿ ಗೌರವಿಸಿದೆ.