ಲಕ್ನೋ ತಂಡ ತವರಿನಲ್ಲಿ ಅಬ್ಬರದ ಪ್ರದರ್ಶನ ನೀಡಿ ಜಯ ಸಾಧಿಸಿದೆ. ತವರಿನ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದ ಆಟಗಾರರು ತವರಿನಲ್ಲಿ ಮೊದಲ ಗೆಲುವಿನ ನಗೆ ಬೀರಿದ್ದಾರೆ. ಈ ವೇಳೆ ಹಲವು ಆಟಗಾರರು ತಂಡದ ಜಯದಲ್ಲಿ ಮಿಂಚಿದ್ದಾರೆ. ಆರಂಭಿಕರಾದ ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಮ್ ಅರ್ಧಶತಕ ಬಾರಿಸಿ ಮಿಂಚಿದರು. ಇನ್ನು ಬೌಲಿಂಗ್‌ನಲ್ಲಿ ಭರವಸೆಯ ಬೌಲರ್ ದಿಗ್ವೇಶ್ ರಾಠಿ ಬಿಗುವಿನ ದಾಳಿ ನಡೆಸಿ ಪಂದ್ಯದ ಚಿತ್ರವನ್ನೇ ಬದಲಿಸಿದರು. ಈ ಗೆಲುವಿನ ಹೀರೋ ಆ ಓಪನರ್ ಆತ 193 ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ ಮಿಚೆಲ್ ಮಾರ್ಷ್.
ಲಕ್ನೋ ಸೂಪರ್ ಜೈಂಟ್ಸ್ ತವರಿನಲ್ಲಿ ಅಬ್ಬರಿಸಿದ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆದಿದೆ. ಪ್ರಸಕ್ತ ಐಪಿಎಲ್‌ನಲ್ಲಿ 2ನೇ ಗೆಲುವು ದಾಖಲಿಸಿರುವ ಎಲ್‌ಎಸ್‌ಜಿ ಭರವಸೆ ಮೂಡಿಸಿದೆ. ಮುಂಬೈ ಇಂಡಿಯನ್ಸ್‌ಗೆ ನೀಡಿದ್ದ 204 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಹಾರ್ದಿಕ್ ಪಡೆ ಆಘಾತ ಅನುಭವಿಸಿದೆ. ಕೊನೆಯ ವರೆಗೂ ಹೋರಾಟ ನಡೆಸಿದರೂ ಅಗತ್ಯ ರನ್ ಕಲೆ ಹಾಕುವಲ್ಲಿ ವಿಫಲರಾದ ಮುಂಬೈ ಬ್ಯಾಟರ್ಸ್ ಪ್ರಯತ್ನ ವ್ಯರ್ಥವಾಗಿದೆ. ಮುಂಬೈ 12 ರನ್ ಸೋಲು ಕಂಡಿದೆ.

ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಇತಿಹಾಸ ನಿರ್ಮಿಸಿದರು. ಪವರ್‌ಪ್ಲೇನ ಆರು ಓವರ್‌ಗಳಲ್ಲಿ 30 ಎಸೆತಗಳನ್ನು ಎದುರಿಸಿದ ಮೊದಲ ಬ್ಯಾಟರ್ ಎಂಬ ವಿಶಿಷ್ಟ ದಾಖಲೆಯನ್ನು ಮಾರ್ಷ್ ಸೃಷ್ಟಿಸಿದರು. ಈ ಪಂದ್ಯದಲ್ಲಿ, ಮಿಚೆಲ್ ಮಾರ್ಷ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು.
ಮಿಚೆಲ್ ಮಾರ್ಷ್ ಅವರ ಸ್ಫೋಟಕ ಬ್ಯಾಟಿಂಗ್ ಆಧಾರದ ಮೇಲೆ, ಲಕ್ನೋ ಮೊದಲ ಆರು ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 69 ರನ್ ಗಳಿಸಿ ಉತ್ತಮ ಆರಂಭ ಪಡೆಯಿತು. ಇದರೊಂದಿಗೆ ಪವರ್‌ಪ್ಲೇ ಒಳಗೆ ಅರ್ಧಶತಕ ಗಳಿಸಿದ ಲಕ್ನೋ ಸೂಪರ್ ಜೈಂಟ್ಸ್‌ನ ಎರಡನೇ ಬ್ಯಾಟರ್ ಮಾರ್ಷ್ ಎನಿಸಿಕೊಂಡರು. ಮಾರ್ಷ್ ಕೇವಲ 31 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 60 ರನ್ ಗಳಿಸಿದರು. ಐಪಿಎಲ್ 2025ರಲ್ಲಿ ಇದು ಅವರ ಮೂರನೇ ಅರ್ಧಶತಕವಾಗಿತ್ತು. ಐಪಿಎಲ್ 2023 ರಲ್ಲಿ ಕೈಲ್ ಮೇಯರ್ಸ್ ಎರಡು ಬಾರಿ ಪವರ್‌ಪ್ಲೇ ಮುಗಿಯುವ ಮೊದಲು ಅರ್ಧಶತಕ ಗಳಿಸಿದ ಸಾಧನೆ ಮಾಡಿದರು.
ಮುಂಬೈ ಇಂಡಿಯನ್ಸ್ ತಂಡದ ಮಿಸ್ಟರಿ ಸ್ಪಿನ್ನರ್ ವಿಘ್ನೇಶ್ ಪುತ್ತೂರ್ ಎಸೆತದಲ್ಲಿ ಮಿಚೆಲ್ ಮಾರ್ಷ್ ಔಟ್ ಆಗುವ ಮೂಲಕ ತಮ್ಮ ಸ್ಫೋಟಕ ಪ್ರದರ್ಶನವನ್ನು ಏಳನೇ ಓವರ್‌ನಲ್ಲಿ ಕೊನೆಗೊಳಿಸಿದರು. ವಿಘ್ನೇಶ್ಅವರ ಟಾಸ್ಡ್ ಅಪ್ ಎಸೆತವನ್ನು ಫ್ಲಿಕ್ ಮಾಡಲು ಮಾರ್ಷ್ ಪ್ರಯತ್ನಿಸಿದರು. ಬೌಲರ್ ಸ್ವತಃ ಅದ್ಭುತ ಕ್ಯಾಚ್ ಹಿಡಿದರು. ಆದಾಗ್ಯೂ, ಔಟ್ ಆಗುವ ಮೊದಲು ಅವರು ಲಕ್ನೋ ತಂಡಕ್ಕೆ ಭದ್ರ ಬುನಾದಿ ಹಾಕಿ ಗೆಲುವಿನ ಹೀರೋ ಎನಿಸಿಕೊಂಡರು.