ಆಸ್ಟ್ರೇಲಿಯಾದಲ್ಲಿ ಸದ್ಯ ಬಿಗ್ ಬ್ಯಾಷ್ ಲೀಗ್ ನಡೆಯುತ್ತಿದೆ. ಈ ವೇಳೆ ಲೀಗ್‌ನ 19ನೇ ಪಂದ್ಯ ಗುರುವಾರ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಹೋಬರ್ಟ್ ಹರಿಕೇನ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪರ್ತ್ ಸ್ಕಾರ್ಚರ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 229 ರನ್ ಸೇರಿಸಿತು. ಈ ವೇಳೆ ಪರ್ತ್ ಸ್ಕಾರ್ಚರ್ಸ್ ತಂಡದ ಆರಂಭಿಕ ಆಟಗಾರ ಭರ್ಜರಿ ಶತಕ ಬಾರಿಸಿ ತಂಡಕ್ಕೆ ಆಧಾರವಾದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪರ್ತ್ ಸ್ಕಾರ್ಚರ್ಸ್ ತಂಡದ ಆರಂಭ ಸಾಧಾರಣವಾಗಿತ್ತು. ಫಿನ್ ಅಲೆನ್ (16) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಕೂಪರ್ ಕಾನೋಲಿ ಸಹ ರನ್ ಬರ ಅನುಭವಿಸಿದರು. ಮೂರನೇ ವಿಕೆಟ್‌ಗೆ ಮಿಚೆಲ್ ಮಾರ್ಷ್ ಹಾಗೂ ಆರನ್ ಹಾರ್ಡಿ ಜೊಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ, ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾಯಿತು.

ಮೂರನೇ ವಿಕೆಟ್‌ಗೆ ಮಿಚೆಲ್ ಮಾರ್ಷ್ ಹಾಗೂ ಆರನ್ ಹಾರ್ಡಿ ಜೋಡಿ ಪವರ್ ಪ್ಲೇನಿಂದ ಡೆತ್ ಓವರ್ ವರೆಗೂ ವಿಕೆಟ್ ಬೀಳದಂತೆ ಕಾಯ್ದುಕೊಂಡಿತು. ಈ ವೇಳೆ 84 ಎಸೆತಗಳಲ್ಲಿ 164 ರನ್ ಹರಿದು ಬಂದಿತು.
ಭರವಸೆಯ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇವರು ಕೇವಲ 55 ಎಸೆತಗಳಲ್ಲಿ ಶತಕ ಪೂರೈಸಿದರು. ಇವರು 58 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸೇರಿದಂತೆ 102 ರನ್ ಬಾರಿಸಿ ಅಬ್ಬರಿಸಿದರು. ತಮ್ಮ ಅದ್ಭುತ ಶತಕದೊಂದಿಗೆ, ಮಿಚೆಲ್ ಮಾರ್ಷ್ ಬಿಗ್ ಬ್ಯಾಷ್ ಲೀಗ್‌ನಲ್ಲಿ 2,000 ರನ್‌ಗಳನ್ನು ಸಹ ತಲುಪಿದ್ದಾರೆ. ಅವರು ಪರ್ತ್ ಸ್ಕಾರ್ಚರ್ಸ್ ಪರ ತಮ್ಮ ಎಲ್ಲಾ ಬಿಬಿಎಲ್ ಪಂದ್ಯಗಳನ್ನು ಆಡಿದ್ದಾರೆ, 76 ಪಂದ್ಯಗಳಲ್ಲಿ ಒಟ್ಟು 2,031 ರನ್‌ಗಳನ್ನು ಗಳಿಸಿದ್ದಾರೆ. ಅವರು ಬಿಬಿಎಲ್‌ನಲ್ಲಿ ಇದುವರೆಗೆ ಎರಡು ಶತಕಗಳು ಮತ್ತು 12 ಅರ್ಧಶತಕಗಳನ್ನು ಗಳಿಸಿದ್ದಾರೆ. ಟಿ20 ವಿಶ್ವಕಪ್ ಆಯ್ಕೆಗೂ ಮುನ್ನವೇ ಮಿಚೆಲ್ ಮಾರ್ಷ್ ಫಾರ್ಮ್‌ಗೆ ಮರಳಿರುವುದು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ನೆಮ್ಮದಿ ನೀಡಿದೆ.
ಮಧ್ಯಮ ಕ್ರಮಾಂಕದ ಆರನ್ ಹಾರ್ಡಿ 43 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 94 ರನ್ ಸಿಡಿಸಿದರು.
230 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಹೋಬರ್ಟ್ ಹರಿಕೇನ್ಸ್ ತಂಡದ ಬ್ಯಾಟರ್‌ಗಳು ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಭರವಸೆಯ ಆಟಗಾರರು ಜವಾಬ್ದಾರಿಯುತ ಆಟ ಆಡುವ ಸೂಚನೆಯನ್ನು ನೀಡಿದರೂ ಸಹ, ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ತಂಡದ ಪರ ಯಾವೊಬ್ಬ ಬ್ಯಾಟರ್ ಅರ್ಧಶತಕ ಬಾರಿಸಲಿಲ್ಲ. ಅಂತಿಮವಾಗಿ ಹೋಬರ್ಟ್ ಹರಿಕೇನ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 189 ರನ್ ಸೇರಿಸಿ 40 ರನ್ ಸೋಲು ಕಂಡಿತು. ಪರ್ತ್ ತಂಡ ಆಡಿರುವ 5 ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.