17ನೇ ಆವೃತ್ತಿಯ ಐಪಿಎಲ್ ಆರಂಭವಾಗಿದ್ದು, ರೋಚಕತೆ ಹೆಚ್ಚಿಸಿದೆ. ಈಗಾಗಲೇ ಸ್ಟಾರ್ ಆಟಗಾರರ ಆಟ ತಂಡಕ್ಕೆ ನೆರವಾಗುತ್ತಿದ್ದು, ಗೆಲುವಿನಲ್ಲಿ ಅಗತ್ಯ ಕೊಡುಗೆ ನೀಡುತ್ತಾ ಇದ್ದಾರೆ. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ಭಾರೀ ಬೆಲಗೆ ಖರೀದಿಸಿದ ಸ್ಟಾರ್ ಪ್ಲೇಯರ್ ಐಪಿಎಲ್‌ನಲ್ಲಿ ತನ್ನ ಖದರ್ ತೋರಿಸುತ್ತಿಲ್ಲ ಎಂಬ ಚಿಂತೆ ಆರಂಭವಾಗಿದೆ.
ಐಪಿಎಲ್‌ನಲ್ಲಿ ಈಗಾಗಲೇ ಕೊಲ್ಕತ್ತಾ ಎರಡು ಪಂದ್ಯಗಳನ್ನು ಆಡಿದೆ. ಎಸ್‌ಆರ್‌ಎಚ್ ವಿರುದ್ಧ ತವರಿನಲ್ಲಿ ಅಬ್ಬರಿಸಿದರೆ, ಬೆಂಗಳೂರು ವಿರುದ್ಧ ಚಿನ್ನಸ್ವಾಮಿ ಅಂಗಳದಲ್ಲಿ ಅಮೋಘ ಪ್ರದರ್ಶನ ನೀಡಿದೆ. ಈ ವೇಳೆ ತಂಡದ ಯುವ ಆಟಗಾರರು ಅಬ್ಬರದ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗುತ್ತಿದ್ದಾರೆ. ಆದರೆ ಕಾಸ್ಟಲಿ ಪ್ಲೇಯರ್ ಟ್ಯಾಗ್ ಹೊಂದಿರುವ ಒಬ್ಬ ಪ್ಲೇಯರ್ ಮಾತ್ರ ಇನ್ನು ಲಯ ಕಂಡು ಕೊಳ್ಳಲು ಪರದಾಟ ನಡೆಸಿದ್ದಾರೆ.

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್, ಅಬ್ಬರಿಸಿದ್ದರು. ಇವರ ಈ ಪ್ರದರ್ಶನ ಅವರ ಮೌಲ್ಯವನ್ನು ಐಪಿಎಲ್ ಹರಾಜಿನಲ್ಲಿ ಹೆಚ್ಚಾಗುವಂತೆ ಮಾಡಿತ್ತು. ಹರಾಜಿನಲ್ಲೂ ಇವರ ಹೆಸರು ಬರುತ್ತಿದ್ಧಂತೆ ಫ್ರಾಂಚೈಸಿಗಳು ಇವರನ್ನು ಕೊಳ್ಳಲು ತಾಮುಂದು ನಾಮುಂದು ಎಂಬಂತೆ ಫೈಟ್ ನಡೆಸಿದರು. ಕೋಟಿ ಕೋಟಿ ರೂಪಾಯಿ ಇವರಿಗೆ ಸುರಿಯಲು ಮುಂದಾದರು. ಆದರೆ ಹರಾಜಿನ ಬಾಜಿಯನ್ನು ಕೆಕೆಆರ್ ಗೆದ್ದಿತು. ಬರೋಬ್ಬರಿ 24.75 ಕೋಟಿ ರೂ. ನೀಡಿ ಮಿಚೆಲ್ ಸ್ಟಾರ್ಕ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು.
ಅಲ್ಲಿಂದ ಸ್ಟಾರ್ಕ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿತು. ಏಕೆಂದರೆ ಐಪಿಎಲ್ ಇತಿಹಾಸದಲ್ಲೇ ಇವರು ದುಬಾರಿ ಆಟಗಾರ ಎಂಬ ಟ್ಯಾಗ್‌ನ್ನು ಪಡೆದುಕೊಂಡಿದ್ದಾರೆ. ಇವರ ಆಟವನ್ನು ನೋಡಲೇ ಕೆಕೆಆರ್ ಅಭಿಮಾನಿಗಳು ಸಹ ತುದಿಗಾಲಿನಲ್ಲಿ ನಿಂತಿದ್ದರು. ಆದರೆ ಅವರಿಗೆ ಸತತ ನಿರಾಸೆ ಕಾದಿತ್ತು. ಅಭ್ಯಾಸ ಪಂದ್ಯದಲ್ಲಿ ರಿಂಕು ಸಿಂಗ್, ದುಬಾರಿ ಆಟಗಾರನಿಗೆ ಮನಬಂದಂತೆ ಥಳಿಸಿದರು.
ಮಿಚೆಲ್ ಸ್ಟಾರ್ಕ್ ಮೊದಲ ಪಂದ್ಯದಲ್ಲಿ ಎಸ್‌ಆರ್‌ಎಚ್ ವಿರುದ್ಧ 4 ಓವರ್ ಬೌಲಿಂಗ್ ಮಾಡಿ 53 ರನ್ ನೀಡಿದರು. ಆರ್‌ಸಿಬಿ ವಿರುದ್ಧ ಪಂದ್ಯದಲ್ಲೂ ಇವರು 47 ರನ್ ನೀಡಿ ಕೈ ಸುಟ್ಟುಕೊಂಡರು. ಇವರ ಎಕನಾಮಿ ನೋಡಿದರೆ ಕೆಕೆಆರ್ ಮ್ಯಾನೇಜ್ಮೆಂಟ್‌ಗೆ ನಿದ್ದೆ ಹಾರುತ್ತಿದೆ. ಎಸ್‌ಆರ್‌ಎಚ್ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಕೇವಲ 8 ಡಾಟ್ ಬೌಲ್ ಎಸೆದಿದ್ದು, ಮೂರು ಬೌಂಡರಿ, 4 ಸಿಕ್ಸರ್ ನೀಡಿ ಕೈ ಸುಟ್ಟುಕೊಂಡಿದ್ದಾರೆ.
ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಕಟ್ಟಿ ಹಾಕುವಲ್ಲಿ ಮಿಚೆಲ್ ಸ್ಟಾರ್ಕ್ ಎಡವಿದ್ದಾರೆ. ಸ್ಟಾರ್ಕ್ ಅವರ 13 ಎಸೆತಗಳಲ್ಲಿ ವಿರಾಟ್ 24 ರನ್ ಸಿಡಿಸಿದ್ದಾರೆ. ಇದರಲ್ಲಿ ಮೂರು ಬೌಂಡರಿ, 1 ಸಿಕ್ಸರ್ ಸೇರಿವೆ. ಅಂದರೆ ವಿರಾಟ್ ಬೌಂಡರಿ, ಸಿಕ್ಸರ್‌ಗಳಿಂದಲೇ 18 ರನ್ ಕಲೆ ಹಾಕಿದ್ದಾರೆ. ಬೆಂಗಳೂರು ವಿರುದ್ಧ ಪಂದ್ಯದಲ್ಲಿ ಸ್ಟಾರ್ಕ್ 4 ಬೌಂಡರಿ, 3 ಸಿಕ್ಸರ್ ನೀಡಿದ್ದಾರೆ. ಇನ್ನೊಂದು ವಿಷಯ ಅಂದರೆ 24 ಎಸೆತಗಳಲ್ಲಿ ಕೇವಲ 7 ಎಸೆತಗಳು ಮಾತ್ರ ಡಾಟ್ ಆಗಿವೆ.
ಮಿಚೆಲ್ ಸ್ಟಾರ್ಕ್ ಅವರ ಈ ಆಟವನ್ನು ನೋಡಿದ ಮೇಲೆ ಕೆಕೆಆರ್‌ಗೆ ಒಂದು ಪ್ರಶ್ನೆ ಕಾಡುತ್ತಿದೆ. ಇವರನ್ನು ಕೆಕೆಆರ್ ತಂಡದ ಗೆಲುವಿನಲ್ಲಿ ಮಿಂಚಲಿ ಎಂದು ಹರಾಜಿನಲ್ಲಿ ಖರಿದಿಸಿದೆವಾ ಅಥವಾ ಬೇರೆ ತಂಡಗಳಿಗೆ ಅನುಕೂಲವಾಗಲಿ ಎಂದು ಖರೀದಿಸಿದೆವಾ ಎಂಬ ಅನುಮಾನ ಕಾಡುತ್ತಿದೆ.