
ಅಡಿಲೇಡ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮೊದಲ ಪಂದ್ಯವನ್ನು ಅಹರ್ನಿಶಿಯಾಗಿ ಆಡಲು ಸಜ್ಜಾಗಿವೆ. ಈ ಮಧ್ಯೆ ಆಸ್ಟ್ರೇಲಿಯಾ ತಂಡದಲ್ಲಿ ಕೆಲ ಆಟಗಾರರು ಗಾಯಾಳುಗಳಾಗಿರುವುದು ತಂಡದಲ್ಲಿ ಆತಂಕವನ್ನುಂಟು ಮಾಡಿದೆ. ಈ ಮಧ್ಯೆ ಕೌಟುಂಬಿಕ ಕಾರಣಗಳಿಂದ ಚುಟುಕು ಸರಣಿಯನ್ನು ತಪ್ಪಿಸಿಕೊಂಡಿದ್ದ ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಮೂಲಕ ಆಸಿಸ್ ತಂಡಕ್ಕೆ ಬಲವಾಗಲಿದ್ದಾರೆ.
ಕುಟುಂಬದಲ್ಲಿ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡ ಕಾರಣ ಭಾರತದ ವಿರುದ್ಧದ ಟಿ20 ಸರಣಿಯ ಮಧ್ಯದಲ್ಲಿ ತಂಡವನ್ನು ತೊರೆದಿದ್ದರು ಆಸ್ಟ್ರೇಲಿಯಾದ ಎಡಗೈ ವೇಗಿ. ಈಗ ಸೋಮವಾರದಂದು ತಂಡವನ್ನು ಸೇರಿಕೊಳ್ಳಲು ಅವರು ಸಜ್ಜಾಗಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ನೀಡಿದೆ.
ಸ್ಟಾರ್ಕ್ ಭಾರತದ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಅದಾದ ಬಳಿಕ ಕುಟುಂಬದಲ್ಲಿ ಉಂಟಾದ ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ತಂಡವನ್ನು ತೊರೆಯಲು ಕ್ರಿಕೆಟ್ ಆಸ್ಟ್ರೇಲಿಯಾ ಅವಕಾಶ ಮಾಡಿಕೊಟ್ಟಿತ್ತು. ಈ ಟಿ20 ಸರಣಿಯನ್ನು ಆಸ್ಟ್ರೇಲಿಯಾ 1-2 ರಿಂದ ಸೋಲುಕಂಡಿತ್ತು.
"ಕುಟುಂಬದಲ್ಲಿನ ಕಷ್ಟದ ಸಮಯಕ್ಕಾಗಿ ಸ್ಟಾರ್ಕ್ ಅವರ ಬಗ್ಗೆ ನಾವು ಬೇಸರವನ್ನು ಹೊಂದಿದ್ದೇವೆ. ಕುಟುಂಬದೊಂದಿಗೆ ಅವರಿಗೆ ಕಾಲ ಕಳೆಯಲು ಸಮಯ ಸಿಕ್ಕಿದ್ದಕ್ಕೆ ಸಂತಸಗೊಂಡಿದ್ದೇವೆ. ಈಗ ಅವರನ್ನು ಮತ್ತೆ ತಂಡಕ್ಕೆ ಸೋಮವಾರ ಸ್ವಾಗತಿಸಲು ನಾವು ಎದುರುನೋಡುತ್ತಿದ್ದೇವೆ" ಎಂದು ಆಸ್ಟ್ರೇಲಿಯಾ ಕೋಚ್ ಜಸ್ಟೀನ್ ಲ್ಯಾಂಗರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ಆಸ್ಟ್ರೇಲಿಯಾ ತಂಡದಲ್ಲಿ ಕೆಲ ಆಟಗಾಋರು ಗಾಯಾಗಳಾಗಿರುವುದರಿಂದ ತಂಡ ಸಮತೋಲನವನ್ನು ಹೊಂದಲು ಪರದಾಡುತ್ತಿದೆ. ಈ ಸಂದರ್ಭದಲ್ಲಿ ಸ್ಟಾರ್ಕ್ ಪುನರಾಗಮನ ತಂಡಕ್ಕೆ ಸಾಕಷ್ಟ ಬಲವನ್ನು ತುಂಬಲಿದೆ. ಆಸ್ಟ್ರೇಲಿಯಾದ ತ್ರಿವಳಿ ವೇಗಿಗಳಾದ ಸ್ಟಾರ್ಕ್, ಹ್ಯಾಜಲ್‌ವುಡ್ ಹಾಗೂ ಪ್ಯಾಟ್‌ಕಮ್ಮಿನ್ಸ್, ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ.