
ಅದ್ಭುತ ಫಾರ್ಮ್‌ನಲ್ಲಿರುವ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಏಕದಿನ ಶ್ರೇಯಾಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರು ಒಂದ್ಯಗಳ ಏಕದಿನ ಸರಣಿಯ್ಲಲಿ ಭಾರತದ ಪರವಾಗಿ ಮಿಥಾಲಿ ರಾಜ್ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದರು. ಮೂರು ಪಂದ್ಯಗಳಲ್ಲಿಯೂ ಮಿಥಾಲಿ ಅರ್ಧ ಶತಕವನ್ನು ದಾಖಲಿಸಿ ತಂಡಕ್ಕೆ ಆಧಾರವಾಗಿದ್ದರು. ಈ ಪ್ರದರ್ಶನ ಮಿಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ ಅವರನ್ನು ನಂಬರ್1 ಸ್ಥಾನಕ್ಕೇರಿಸಿದೆ.
39ರ ಹರೆಯದ ಮಿಥಾಲಿ ರಾಜ್ 22 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ 8ನೇ ಬಾರಿಗೆ ಅಗ್ರ ಸ್ಥಾನಕ್ಕೇರಿದ್ದಾರೆ. 2018ರಲ್ಲಿ ಮಿಥಾಲಿ ರಾಜ್ ಕೊನೆಯ ಬಾರಿಗೆ ಈ ಅಗ್ರ ಶ್ರೇಯಾಂಕದ ಸಾಧನೆಯನ್ನು ಮಾಡಿದ್ದರು. ಈಗ ಮತ್ತೆ ಅದು ಮರುಕಳಿಸಿದೆ.
ಮಿಥಾಲಿ ರಾಜ್ ಇಂಗ್ಲೆಂಡ್ ವಿರುದ್ಧದ ಪ್ರವಾಸ ಆರಂಭಿಸುವ ಮುನ್ನ ಶ್ರೇಯಾಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದರು. ಇಂಗ್ಲೆಂಡ್ ಮಹಿಳೆಯರ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 72 ರನ್ ಬಾರಿಸುವ ಮೂಲಕ ಟಾಪ್ 5ಕ್ಕೇರಿದರು. ಅದಾದ ನಂತರ ಉಳಿದ ಎರಡು ಪಂದ್ಯಗಳಲ್ಲಿಯೂ ಮಿಥಾಲಿ ಅರ್ಥ ಶತಕವನ್ನು ದಾಖಲಿಸಿದರು. ಅಂತಿಮ ಪಂದ್ಯದಲ್ಲಿ ಅಜೇಯ ಸಾಧನೆ ಮಾಡುವ ಮೂಲಕ ತಂಡವನ್ನು ಗೆಲ್ಲಿಸಿವಲ್ಲಿ ಯಶಸ್ವಿಯಾದರು. ಈ ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 206 ರನ್‌ಗಳಿಸಿದ್ದಾರೆ ಮಿಥಾಲಿ ರಾಜ್.
ಮಿಥಾಲಿ ರಾಜ್ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ 2005ರಲ್ಲಿ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಅಜೇಯ 91 ರನ್‌ಗಳಿದ ನಂತರ ನಂಬರ್ 1 ಪಟ್ಟಕ್ಕೇರಿದ್ದರು. ಮಹಿಳಾ ಕ್ರಿಕೆಟ್‌ನಲ್ಲಿ 16 ವರ್ಷಗಳ ಈ ಅಂತರ ಯಾವುದೇ ಮಹಿಳಾ ಬ್ಯಾಟರ್‌ಗೆ ಹೋಲಿಸಿದರೆ ಅತ್ಯಂತ ಸುದೀರ್ಘವಾದದ್ದು ಎಂಬ ದಾಖಲೆಗೆ ಪಾತ್ರವಾಗಿದೆ. ಇಂಗ್ಲೆಂಡ್‌ನ ಜಾನೆಟ್ ಬ್ರಿಟಿನ್ 1984ರಲ್ಲಿ ಮೊದಲ ಬಾರಿಗೆ ನಂಬರ್ 1 ಸ್ಥಾನಕ್ಕೇರಿದ್ದರೆ ನಂತರ 1995ರಲ್ಲಿ ಕೊನೆಯ ಬಾರಿಗೆ ನಂಬರ್ 1 ಸ್ಥಾನಕ್ಕೇರಿದ್ದರು. ಇದು ಈ ಹಿಂದಿನ ದಾಖಲೆಯಾಗಿತ್ತು.
ಈ ಮಧ್ಯೆ ಯುವ ಆಟಗಾರ್ತಿ ಶಫಾಲಿ ವರ್ಮ 49 ಸ್ಥಾನಗಳ ಏರಿಕೆ ಕಂಡಿದ್ದು 71ನೇ ಸ್ಥಾನಕ್ಕೇರಿದ್ದಾರೆ. ಜೂಲನ್ ಗೋಸ್ವಾಮಿ ಬ್ಯಾಟಿಂಗ್‌ನಲ್ಲಿ 53ನೇ ಸ್ಥಾನಕ್ಕೇರಿದ್ದು ಬೌಲಿಂಗ್‌ನಲ್ಲಿ 5ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸ್ಮೃತಿ ಮಂಧಾನ ಟಾಪ್ 10ನಲ್ಲಿರುವ ಭಾರತದ ಎರಡನೇ ಬ್ಯಾಟರ್ ಆಗಿದ್ದು 9ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.