ಕೋಚ್ ರಮೇಶ್ ಹೇಳಿಕೆಯಿಂದ ಮಿಥಾಲಿ ಪ್ರಕರಣಕ್ಕೆ ಸಕತ್ ಟ್ವಿಸ್ಟ್

ಬೆಂಗಳೂರು, ನವೆಂಬರ್ 28: ಭಾರತದ ಮಹಿಳಾ ತಂಡದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ಆಡುವ ಹನ್ನೊಂದಕ್ಕೆ ಆಯ್ಕೆ ಮಾಡದ ವಿಷಯಕ್ಕೆ ಸಂಬಂಧಿಸಿದಂತೆ ಕೆಸರೆರಚಾಟ ಮುಂದುವರೆದಿದೆ. ಮುಖ್ಯ ಕೋಚ್ ರಮೇಶ್ ಪೊವಾರ್ ಅವರು ಈಗ ನೀಡಿರುವ ಹೇಳಿಕೆಯೊಂದು ಈ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಮಹಿಳೆಯರ ವಿಶ್ವ ಟಿ20ಯಲ್ಲಿ ಆರಂಭಿಕ ಆಟಗಾರ್ತಿಯಾಗಿ ಆಡಲು ಅವಕಾಶ ನೀಡಬೇಕು ಇಲ್ಲದಿದ್ದರೆ ನಿವೃತ್ತಿ ಘೋಷಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಪೊವಾರ್ ಬಾಂಬ್ ಸಿಡಿಸಿದ್ದಾರೆ.
ಟೀಂ ಇಂಡಿಯಾದ ಏಕದಿನ ನಾಯಕಿ 'ಬ್ಲಾಕ್ ಮೇಲ್ ಹಾಗೂ ಒತ್ತಡ' ತಂತ್ರವನ್ನು ಕೋಚ್ ಗಳ ಮೇಲೆ ಹೇರುವುದನ್ನು ನಿಲ್ಲಿಸಬೇಕು. ವೈಯಕ್ತಿಕ ಹಿತಾಸಕ್ತಿಗಿಂತ ತಂಡದ ಹಿತಾಸಕ್ತಿ ಮುಖ್ಯ ಎಂಬುದನ್ನು ಮನಗಾಣಬೇಕು ಎಂದು ಪೊವಾರ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ನಲ್ಲಿ ಇತ್ತೀಚೆಗೆ ನಡೆದ ವಿಶ್ವ ಟಿ20ಯ ಸೆಮಿಫೈನಲ್ ಪಂದ್ಯದಲ್ಲಿ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ಆಡುವ ಹನ್ನೊಂದು ಮಂದಿ ಪಟ್ಟಿಯಿಂದ ಹೊರಗಿಡಲಾಗಿತ್ತು. ಈ ಬಗ್ಗೆ ನಾಯಕಿ ಹರ್ಮನ್ ಪ್ರೀತ್ ಕೌರ್ ಪ್ರಶ್ನಿಸಿದ ಮಾಧ್ಯಮದವರು, ಸಾರ್ವಜನಿಕರು ಉತ್ತರಕ್ಕಾಗಿ ಹುಡುಕಾಟ ನಡೆಸಿದಾಗ, ಕೋಚ್ ಹಾಗೂ ಆಟಗಾರ್ತಿಯರ ನಡುವಿನ ವೈಮನಸ್ಯ ಬೆಳಕಿಗೆ ಬಂದಿದೆ.

ಮಿಥಾಲಿ ಸ್ವಾರ್ಥಿಯಂತೆ ವರ್ತಿಸಿದರು
ಕಳೆದ ಜುಲೈ ತಿಂಗಳಿನಲ್ಲಿ ಮಧ್ಯಂತರ ಕೋಚ್ ಆಗಿ ತುಷಾರ್ ಅರೊಥೆ ಬದಲಿಗೆ ತಂಡವನ್ನು ರಮೇಶ್ ಪೊವಾರ್ ಸೇರಿಕೊಂಡವರು. ಕೋಚಿಂಗ್ ವಿಷಯದಲ್ಲಿ ಮಿಥಾಲಿ ರಾಜ್ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಈಗ ಬಿಸಿಸಿಐ ಸಮಿತಿಗೆ ಕಳಿಸಿರುವ ಇಮೇಲ್ ಮಾಡಿರುವಂತೆ, ಮಿಥಾಲಿ ಅವರು ಭಾರತೀಯ ಮಹಿಳಾ ಕ್ರಿಕೆಟ್ ನ ಸುಧಾರಣೆಯತ್ತ ಅವರ ನೋಟ ಹರಿಸುತ್ತಾರೆ ಎಂಬ ಆಶಯ ಹೊಂದಿದ್ದೇನೆ ಎಂದು ಬರೆದಿದ್ದಾರೆ.

ಮಿಥಾಲಿರಾಜ್ ರಿಂದ ಬೆದರಿಕೆ
ವೆಸ್ಟ್ ಇಂಡೀಸ್ ನಲ್ಲಿ ನಡೆದ ವಿಶ್ವಟಿ20 ಟೂರ್ನಮೆಂಟ್ ನಲ್ಲಿ ಮಿಥಾಲಿ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಎಂದು ಪೂರ್ವ ನಿಯೋಜಿತವಾಗಿತ್ತು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಓಪನಿಂಗ್ ಮಾಡಿರಲಿಲ್ಲ ಹಾಗೂ ತಂಡ ಉತ್ತಮ ಮೊತ್ತ ಕಲೆ ಹಾಕಿತ್ತು. ಆದರೆ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿಯಲು ಬಿಡದಿದ್ದರೆ, ಟಿ20ಗೆ ವಿದಾಯ ಹೇಳಿ, ಭಾರತಕ್ಕೆ ತೆರಳುತ್ತೇನೆ ಎಂದು ಬೆದರಿಕೆ ಹಾಕಿದ್ದರು.

ಬ್ಯಾಟಿಂಗ್ ಕ್ರಮಾಂಕ ಬದಲಿ ಏಕೆ?
ವಿಶ್ವ ಟಿ20 ಟೂರ್ನಮೆಂಟ್ ಗೂ ಮುನ್ನ ನಡೆದ ಅಭ್ಯಾಸ ಪಂದ್ಯಗಳಲ್ಲಿ ಮಿಥಾಲಿ ರಾಜ್ ಅವರು ಉತ್ತಮ ಸ್ಟ್ರೈಕ್ ರೇಟ್ ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದರು. ಉತ್ತಮ ಓಪನಿಂಗ್ ಪಡೆಯುವುದು ಈ ಪಿಚ್ ಗಳಲ್ಲಿ ತುಂಬ ಮುಖ್ಯವಾಗಿತ್ತು. ತ್ವರಿತವಾಗಿ ರನ್ ಗಳಿಸಲು ಬೇಕಾದ ಕೌಶಲ್ಯ, ಫಿಟ್ನೆಸ್ ಬೆಳೆಸಿಕೊಳ್ಳದ ಕಾರಣ, ಸ್ಲೋ ಪಿಚ್ ನಲ್ಲಿ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ನಿರ್ಧರಿಸಲಾಯಿತು ಎಂದು ರಮೇಶ್ ಪತ್ರದಲ್ಲಿ ಬರೆದಿದ್ದಾರೆ.

ತಂಡದ ರಣತಂತ್ರಕ್ಕೆ ತಲೆ ಬಾಗಬೇಕು
ಎಂಥಾ ದೊಡ್ಡ ಆಟಗಾರ್ತಿಯಾದರೂ ತಂಡದ ರಣತಂತ್ರಕ್ಕೆ ತಲೆ ಬಾಗಬೇಕು,ಮ್ಯಾನೇಜ್ಮೆಂಟ್ ನೀಡಿದ ಸೂಚನೆಯಂತೆ ಕಾರ್ಯಪ್ರವೃತ್ತರಾಗಬೇಕಿತ್ತು. ವೈಯಕ್ತಿಕ ಮೈಲಿಗಲ್ಲು ದಾಡುವುದು ಉದ್ದೇಶವಾಗಬಾರದು. ಹೀಗಾಗಿ, ಪವರ್ ಪ್ಲೇ ಸಮಯದಲ್ಲಿ ತಾನಿಯಾ ಭಾಟಿಯಾ ಹಾಗೂ ಹೇಮಲತಾರನ್ನು ಕಣಕ್ಕಿಳಿಸಿ ಉತ್ತಮ ಫಲಿತಾಂಶ ಪಡೆಯಲಾಯಿತು. ತಂಡದ ಯೋಜನೆಗೆ ಒಪ್ಪಿದ್ದ ಮಿಥಾಲಿ ನಂತರ ಹಠ ಮಾಡಿದ್ದು ಸರಿಯಲ್ಲ ಎಂದು ರಮೇಶ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications