
ಚೆನ್ನೈ, ಫೆಬ್ರವರಿ 22: 9 ರನ್ನಿಗೆ ಇಡೀ ಕ್ರಿಕೆಟ್ ತಂಡವೇ ಔಟಾಗಿರುವ ಅಪರೂಪದ ಪಂದ್ಯಕ್ಕೆ ತಮಿಳುನಾಡಿನ ಪಾಲ್ಮಿರಾ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಿಯು. ಗುರುವಾರ (ಫೆಬ್ರವರಿ 21) ನಡೆದ ಹಿರಿಯ ಮಹಿಳೆಯರ ಟಿ20 ಲೀಗ್ ಪಂದ್ಯದಲ್ಲಿ ಮಿಝೋರಾ ಮಹಿಳಾ ತಂಡ 9 ರನ್ನಿಗೆ ಆಲ್ ಔಟ್ ಆಗುವ ಮೂಲಕ ಆಘಾತ ಅನುಭವಿಸಿತು.
ಹಿರಿಯ ಮಹಿಳೆಯರ ಟಿ20 ಪಂದ್ಯಕ್ಕಾಗಿ ಮಿಝೋರಾಮ್ ಮತ್ತು ಮಧ್ಯಪ್ರದೇಶ ತಂಡಗಳು ಮೈದಾನಕ್ಕಿಳಿದಿದ್ದವು. ಈ ವೇಳೆ ಇನ್ನಿಂಗ್ಸ್ ಆರಂಭಿಸಿದ ಮಿಝೋರಾಮ್ ತಂಡ ಕೇವಲ 10 ರನ್ನಿಗೆ ಸಂಪೂರ್ಣ ವಿಕೆಟ್ ಒಪ್ಪಿಸಿತು. 10 ರನ್ ಗುರಿ ಬೆನ್ನತ್ತಿದ ಮಧ್ಯಪ್ರದೇಶ ತಂಡ ನಿರಾಯಾಸವಾಗಿ ಪಂದ್ಯ ಗೆದ್ದುಕೊಂಡಿತು.
ಬ್ಯಾಟಿಂಗ್ ಆರಂಭಿಸಿದ ಮಿಝೋರಾಮ್‌ನ 9 ವಿಕೆಟ್‌ಗಳು ತಲಾ 0 ರನ್‌ನೊಂದಿಗೆ ಮುರಿದುಬಿದ್ದವು. ಮಿಝೋರಾಮ್ 13.5 ಓವರ್‌ಗೆ ಇನ್ನಿಂಗ್ಸ್ ಮುಗಿಸಿತು. ಇನ್ನೂ ಗಮ್ಮತ್ತಿನ ವಿಷಯವೆಂದರೆ ಮಿಝೋರಾಮ್ ತಂಡ ಮಧ್ಯಪ್ರದೇಶಕ್ಕೆ ನೀಡಿದ 10 ರನ್ ಗುರಿಯೂ ಅದು ಮಿಝೋರಾಮ್ ಆಟಗರ್ತಿಯರ ಶ್ರಮದ ಫಲವಲ್ಲ, ಬದಲಿಗೆ ಆ 10ರಲ್ಲಿ ಅರ್ಧದಷ್ಟು ರನ್ ಮಧ್ಯಪ್ರದೇಶ ತಂಡ ಬೌಲರ್‌ಗಳು ವೈಡ್ ಮೂಲಕ ನೀಡಿದ್ದು!
ಪಂದ್ಯವು ಮಧ್ಯಪ್ರದೇಶದ ಬೌಲರ್ ತರಂಗ್ ಝಾ ಅವರ ಪಾಲಿಗೆ ಅವಿಸ್ಮರಣೀಯವೆನಿಸಿತು. ಕಾರಣ, ಝಾ ಅವರು ಎದುರಾಳಿಯ 4 ವಿಕೆಟ್ ಗಳನ್ನು ಪಡೆದರು. ಅಲ್ಲದೆ, ಎಸೆದ ನಾಲ್ಕು ಓವರ್‌ಗಳಲ್ಲಿ 23 ಎಸೆತಗಳು ಡಾಟ್ ಅನ್ನಿಸಿಕೊಂಡಿತು. ತರಂಗ್ ಅವರ ಮಾರಕ ಬೌಲಿಂಗ್‌ನಿಂದಾಗಿಯೇ ಮಿಝೋರಾಮ್ ತಂಡ 5 ಓವರ್ ವೇಳೆಗೆ 5 ವಿಕೆಟ್ ಕಳೆದು ಕೇವಲ 2 ರನ್ ಗಳಿಸಿತ್ತು!.