ಬಹಳ ದಿನಗಳದಿಂದ ಕಾಯುತ್ತಿದ್ದ ರಿಟೇನ್ಶನ್ ಪಾಲೀಸಿ ಲೀಸ್ಟ್ ಇತ್ತೀಚಿಗೆ ಬಿಡುಗಡೆ ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮಾಲೀಕರು ಉಳಿಸಿಕೊಂಡ ಆಟಗಾರರ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ನೀಡಬೇಕಿದೆ. ಎಲ್ಲ ತಂಡಗಳು ತಮ್ಮ ಅಂತಿಮ ಹಂತದ ಕಸರತ್ತು ನಡೆಸಿವೆ. ಆದರೆ ಮುಂಬೈ ಇಂಡಿಯನ್ಸ್ ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಕೈ ಬಿಡಬೇಕು ಎಂಬುದರ ಲೆಕ್ಕಾಚಾರ ನಡೆಸಿದೆ. ತಂಡದಲ್ಲಿ ಹಲವು ಸ್ಟಾರ್ ಆಟಗಾರರು ಇದ್ದು, ಯಾರನ್ನು ಉಳಿಸಿಕೊಂಡರೆ ಯೋಗ್ಯ ಅನ್ನುವುದರ ಕ್ಯಾಲಕುಲೇಷನ್ ಆರಂಭವಾಗಿದೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಇರುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಈ ಬಗ್ಗೆ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ರೋಹಿತ್ ಇನ್ನು ಐಪಿಎಲ್ ಮೈದಾನಕ್ಕೆ ಇಳಿದರೆ ನಾಯಕನಾಗಿ ಮಾತ್ರ ಅಂಗಳ ಪ್ರವೇಶಿಸಬೇಕು ಎನ್ನುವುದು ಕೈಫ್ ಅಭಿಪ್ರಾಯವಾಗಿದೆ.

ರೋಹಿತ್ ಶರ್ಮಾ ಅವರನ್ನು ಕೊಳ್ಳಲು ಹಲವು ಫ್ರಾಂಚೈಸಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಸಾಲಿನಲ್ಲಿ ಆರ್‌ಸಿಬಿ ಸಹ ಕಾಣಿಸಿಕೊಳ್ಳುತ್ತದೆ. ರೋಹಿತ್ ಶರ್ಮಾ ಅವರನ್ನು ಕೊಳ್ಳಲು ಆರ್‌ಸಿಬಿ ಖಜಾನೆ ತೆರೆಯಬೇಕು ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಕೈಫ್ ತಿಳಿಸಿದ್ದಾರೆ. ರೋಹಿತ್ ಶರ್ಮಾ ಒಬ್ಬ ಶ್ರೇಷ್ಠ ಆಟಗಾರ. ಟಿ20 ವಿಶ್ವಕಪ್ ಗೆದ್ದ ನಾಯಕ. ಅವರನ್ನು ಕೊಳ್ಳಲು ಫ್ರಾಂಚೈಸಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಕೈಫ್ ತಿಳಿಸಿದ್ದಾರೆ.
ಆರ್‌ಸಿಬಿ ಈ ನಿಟ್ಟಿನಲ್ಲಿ ತನ್ನ ಪ್ರಯತ್ನವನ್ನು ಮಾಡಬೇಕು. ಅಲ್ಲದೆ ರೋಹಿತ್ ಅವರ ಮನವನ್ನು ವೊಲಿಸಬೇಕು. ಅವರನ್ನು ತಂಡಕ್ಕೆ ಕರೆದುಕೊಂಡು ಅವರಿಗೆ ನಾಯಕತ್ವ ನೀಡಬೇಕು. ಅವರು ಬ್ಯಾಟಿಂಗ್‌ನಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರೂ ಸಹ, ಆಡುವ ಹನ್ನೊಂದನ್ನು ಚೆನ್ನಾಗಿ ತಯಾರಿಸುತ್ತಾರೆ ಎಂದು ಕೈಫ್ ಹೇಳಿದ್ದಾರೆ.
ಆರ್‌ಸಿಬಿಗೆ ಸದ್ಯ ಯಾವುದೇ ಖಾಯಂ ನಾಯಕರಿಲ್ಲ. 2022ರ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದರು. ಬಳಿಕ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಫಾಫ್ ತಂಡವನ್ನು ಮುನ್ನಡೆಸಿದ್ದಾರೆ. ಫಾಫ್‌ಗೆ 40 ವರ್ಷ. ಅವರು ಇನ್ನು ಹೆಚ್ಚು ಕಾಲ ಆಡುವುದು ಡೌಟ್. ಈ ನಿಟ್ಟಿನಲ್ಲಿ ರೋಹಿತ್ ಅವರ ಮನವೊಲಿಸಿದರೆ, ಆರ್‌ಸಿಬಿ ಒಬ್ಬ ಒಳ್ಳೆಯ ನಾಯಕನನ್ನು ಪಡೆಯುತ್ತದೆ. ರೋಹಿತ್ ಅವರಿಗೆ ನಾಯಕತ್ವ ಗುಣಗಳು ಇವೆ. ಅದನ್ನು ಆರ್‌ಸಿಬಿ ಸದುಪಯೋಗ ಪಡಿಸಿಕೊಳ್ಳಬೇಕು.

ಕಳೆದ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಗುಜರಾತ್ ಟೈಟನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡಿತ್ತು. ಅಲ್ಲದೆ ರೋಹಿತ್ ಶರ್ಮಾ ಅವರಿಂದ ನಾಯಕತ್ವವನ್ನು ಪಡೆದು, ಹಾರ್ದಿಕ್ ಕೈಗೆ ನೀಡಿತ್ತು. ಇದಾದ ಬಳಿಕ ತಂಡದಲ್ಲಿ ಅಸಮಾಧನದ ಹೊಗೆ ಆಡುತ್ತಿತ್ತು. ಆದರೂ ರೋಹಿತ್, ಒಬ್ಬ ಪ್ಲೇಯರ್ ಆಗಿ ಕಳೆದ ವರ್ಷ ಆಡಿದರು. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗಿ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಯಿತು. ಈಗ ರೋಹಿತ್ ಶರ್ಮಾ ಅವರನ್ನು ಮುಂಬೈ ಉಳಿಸಿಕೊಳ್ಳುತ್ತದೋ ಇಲ್ಲವೋ ಎಂಬ ಚರ್ಚೆಗಳು ಆರಂಭವಾಗಿವೆ.