IND vs NZ: ಮುಂಬೈನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ಪಡೆಗೆ ನಡುಕ ಹುಟ್ಟಿಸಿದ್ದ ಶಮಿ
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಅದ್ಭುತ ಜಯಗಳಿಸಿದ ನಂತರ, ಟೀಮ್ ಇಂಡಿಯಾ ಈಗ ನ್ಯೂಜಿಲೆಂಡ್ ತಂಡವನ್ನು ಬೇಟೆಯಾಡಲು ಸಿದ್ಧವಾಗಿದೆ. ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ನಾಳೆ ಅಂದರೆ ಭಾನುವಾರ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ರೋಚಕ ಪಂದ್ಯ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯವು ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲೊ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2:30 ರಿಂದ ಆರಂಭವಾಗಲಿದೆ.
ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ತಂಡ ಭಾರತಕ್ಕಿಂತ ಮೇಲುಗೈ ಸಾಧಿಸಿದೆ. ಹಲವು ಬಾರಿ ಭಾರತ ತಂಡವನ್ನು ನ್ಯೂಜಿಲೆಂಡ್ ಸೋಲಿಸಿ ಐಸಿಸಿ ಟೂರ್ನಿಗಳಿಂದ ಹೊರ ಹಾಕಿದ ಉದಾಹರಣೆಗಳಿವೆ. ಆದರೆ 2023ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ ಹೀನಾಯವಾಗಿ ಸೋಲಿಸಿತ್ತು. ಈ ಪಂದ್ಯದಲ್ಲಿ ಭಾರತ ತಂಡದ ಗೆಲುವಿನ ಹೀರೋ ಮೊಹಮ್ಮದ್ ಶಮಿಮ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರು. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಗೆ ಭಾರತ ಆತಿಥ್ಯ ವಹಿಸಿತ್ತು. ತವರಿನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತ ತಂಡಕ್ಕೆ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರಾಗಿತ್ತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಭಾರತ ತಂಡಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವಿರಾಟ್ ಕೊಹ್ಲಿ (117) ಮತ್ತು ಶ್ರೇಯಸ್ ಅಯ್ಯರ್ (105) ಶತಕದ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 397 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆಯಲಿಲ್ಲ. ಆರಂಭದಲ್ಲೇ ಡೆವೊನ್ ಕಾನ್ವೇ (13) ಮತ್ತು ರಚಿನ್ ರವೀಂದ್ರ (13) ವಿಕೆಟ್ ಪಡೆದ ಟೀಮ್ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ನ್ಯೂಜಿಲೆಂಡ್ ತಂಡಕ್ಕೆ ಆಘಾತ ನೀಡಿದ್ದರು. ಈ ವೇಳೆ ಒಂದಾದ ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಭಾರತದ ಬೌಲರ್‌ಗಳನ್ನು ಕಾಡಿದರು.
ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಟೀಮ್ ಇಂಡಿಯಾ ಸೆಮಿಫೈನಲ್ ಕನಸಿನ್ನು ನುಚ್ಚುನೂರು ಮಾಡಲು ಹೊರಟ್ಟಿದ್ದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ 181 ರನ್‌ಗಳ ಜೊತೆಯಾಟವಾಡಿದ್ದರು. ಆದರೆ ಬೌಲಿಂಗ್ ದಾಳಿಗಿಳಿದ ಶಮಿ ನ್ಯೂಜಿಲೆಂಡ್ ತಂಡದ ಲೆಕ್ಕಚಾರವನ್ನು ಉಲ್ಟಾ ಮಾಡಿದರು. ಜವಾಬ್ದಾರಿಯುತ ಬ್ಯಾಟಿಂಗ್ ಮಾಡುತ್ತಿದ್ದ ಕೇನ್ ವಿಲಿಯಮ್ಸನ್ (69) ಅವರಿಗೆ ಶಮಿ ಪೆವಿಲಿಯನ್ ದಾರಿ ತೋರಿಸಿದರು. ಇದಾದ ನಂತರ ಬಂದ ಟಾಮ್ ಲ್ಯಾಥಮ್ (೦) ಖಾತೆ ತೆರೆಯುವ ಮುನ್ನವೇ ಶಮಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಮೊಹಮ್ಮದ್ ಶಮಿ ಒಂದೇ ಓವರ್‌ನಲ್ಲಿ ವಿಲಿಯಮ್ಸನ್ ಮತ್ತು ಲ್ಯಾಥಮ್ ವಿಕೆಟ್ ಪಡೆದು ಟೀಮ್ ಇಂಡಿಯಾದ ಫೈನಲ್ ಕನಸಿಗೆ ಜೀವ ತುಂಬಿದ್ದರು. ಇಲ್ಲಿಗೆ ನಿಲ್ಲದ ಶಮಿ ತಮ್ಮ ಉರಿ ಬೌಲಿಂಗ್ ದಾಳಿಯನ್ನು ಮುಂದುವರೆಸಿದ್ದರು. ನ್ಯೂಜಿಲೆಂಡ್ ತಂಡದ ಗೆಲುವಿಗಾಗಿ ಹೋರಾಡತ್ತಿದ್ದ ಡೇರಿಲ್ ಮಿಚೆಲ್ (134) ಶಮಿ ಬೌಲಿಂಗ್ ದಾಳಿಗೆ ಮಕಾಡೆ ಮಲಗಿದ್ದರು. ಮಿಚೆಲ್ ವಿಕೆಟ್ ಪಡೆಯುವುದು ಟೀಮ್ ಇಂಡಿಯಾ ಬೌಲರ್‌ಗಳಿಗೆ ಸವಾಲಗಿತ್ತು. ಜಸ್ಪ್ರೀತ್ ಬುಮ್ರಾ ಸಾಕಷ್ಟು ಪ್ರಯತ್ನ ಮಾಡಿದರು ಮಿಚೆಲ್ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಶಮಿ ಎಸೆತದಲ್ಲಿ ಮಿಚೆಲ್ ಔಟಾಗಿದ್ದರು.
ಇದರೊಂದಿಗೆ ಶಮಿ ಅವರು ಟಿಮ್ ಸೌಥಿ ಮತ್ತು ಲಾಕಿ ಫರ್ಗುಸನ್ ವಿಕೆಟ್ ಪಡೆದು ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಅಂತಿಮವಾಗಿ ನ್ಯೂಜಿಲೆಂಡ್ ತಂಡವನ್ನು 70 ರನ್‌ಗಳಿಂದ ಸೋಲಿಸಿದ್ದ ಭಾರತ ಫೈನಲ್ ತಲುಪಿತ್ತು. ಮತ್ತೊಂದೆಡೆ 7 ವಿಕೆಟ್ ಪಡೆದ ಶಮಿ ಹಲವು ದಾಖಲೆಗಳನ್ನು ಮಾಡಿದ್ದರು.
ಶಮಿ ದಾಖಲೆಗಳು
ಮೊಹಮ್ಮದ್ ಶಮಿ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ 7 ವಿಕೆಟ್ ಪಡೆದ ಐದನೇ ಬೌಲರ್ ಎನಿಸಿಕೊಂಡಿದ್ದರು. ಈ ಮೂಲಕ ಅವರು ಗ್ಲೆನ್ ಮೆಕ್‌ಗ್ರಾತ್, ಆಂಡಿ ಬಿಚೆಲ್, ಟಿಮ್ ಸೌಥಿ ಮತ್ತು ಡಬ್ಲ್ಯೂಡಬ್ಲ್ಯೂ ಡೇವಿಸ್ ಕ್ಲಬ್ ಸೇರಿದ್ದರು. ಭಾರತ ತಂಡದ ಪರ ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಶಮಿ ಏಕದಿನ ವಿಶ್ವಕಪ್‌ನಲ್ಲಿ ನಾಲ್ಕು ಬಾರಿ ಐದು ವಿಕೆಟ್ ಕಬಳಿಸಿ ದಾಖಲೆಯನ್ನು ಮಾಡಿದ್ದರು. ಅಲ್ಲದೆ, ಒಂದೇ ವಿಶ್ವಕಪ್‌ನ ಆವೃತ್ತಿಯಲ್ಲಿ ಮೂರು ಬಾರಿ ಐದು ವಿಕೆಟ್‌ಗಳನ್ನು ಗಳಿಸಿದ ಮೊದಲ ಬೌಲರ್ ಕೂಡ ಆಗಿದ್ದರು.
ಭಾನುವಾರ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಎ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಮತ್ತೊಮ್ಮೆ ಮೊಹಮ್ಮದ್ ಶಮಿ ಮಾರಕವಾಗಬಹುದು. ಶಮಿ ಕೂಡ ನ್ಯೂಜಿಲೆಂಡ್ ತಂಡವನ್ನು ಕಟ್ಟಿ ಹಾಕಲು ಹಲವು ತಂತ್ರಗಳನ್ನು ರೂಪಿಸಲು ಸಜ್ಜಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications