ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಿದೆ. ಈ ಲೀಗ್‌ನಲ್ಲಿ ಸ್ಟಾರ್ ಆಟಗಾರರು ಹಾಗೂ ಅನುಭವಿ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಈ ವೇಳೆ ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ಆಸೆಯನ್ನು ಹೊಂದಿರುವ ಆಟಗಾರರು ಸಹ ಐಪಿಎಲ್‌ನ್ನು ವೇದಿಕೆಯನ್ನಾಗಿಸಿಕೊಳ್ಳುತ್ತಿದ್ದಾರೆ. ಇಂತಹದ್ದೇ ಕನಸನ್ನು ಕಾಣುತ್ತಿರುವ ಆಟಗಾರ ವೇಗದ ಬೌಲರ್ ಮೊಹಮ್ಮದ್ ಶಮಿ. ಟೀಮ್ ಇಂಡಿಯಾಕ್ಕೆ ಕಮ್‌ಬ್ಯಾಕ್ ಮಾಡುವ ಆಸೆ ಹೊಂದಿರುವ ಶಮಿ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ಪರ ಆಡುತ್ತಿದ್ದಾರೆ.
ಎಲ್‌ಎಸ್‌ಜಿ ಪರ ಆಡುತ್ತಿರುವ ವೇಗದ ಬೌಲರ್ ಶಮಿ ಇತ್ತೀಚಿಗೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರು. ಇವರು ಈ ಪಂದ್ಯದಲ್ಲಿ 9 ರನ್ ನೀಡಿ 2 ವಿಕೆಟ್ ಕಬಳಿಸಿದರು. ಇವರ ಈ ಭರ್ಜರಿ ಪ್ರದರ್ಶನ ಕಂಡು ಹಲವು ಮಾಜಿ ಆಟಗಾರರು ಇವರನ್ನು ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಬೇಕು ಎಂದು ತಿಳಿಸಿದ್ದಾರೆ. ಈಗ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಸಹ ಶಮಿ ಅವರ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸೌರವ್ ಗಂಗೂಲಿ ಶಮಿ ಅವರ ಬೌಲಿಂಗ್ ಗುಣಗಾನ ಮಾಡಿದ್ದಾರೆ. ಶಮಿ ಫಿಟ್ ಆಗಿದ್ದು, ಅವರನ್ನು ತಂಡದಲ್ಲಿ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಶಮಿ, ಬುಮ್ರಾ ಅವರೊಂದಿಗೆ ಇನ್ನೊಂದು ತುದಿಯಲ್ಲಿ ಬಿಗುವಿನಿಂದ ಬೌಲಿಂಗ್ ಮಾಡಬಲ್ಲ ಆಟಗಾರ. ಇವರು ಸನ್‌ರೈಸರ್ಸ್ ವಿರುದ್ಧ ಭರ್ಜರಿ ದಾಳಿ ಸಂಘಟಿಸಿದ್ದಾರೆ. ಇವರು ಟೀಮ್ ಇಂಡಿಯಾಕ್ಕೆ ಕಮ್‌ಬ್ಯಾಕ್ ಮಾಡಬೇಕು ಎಂದು ಗಂಗೂಲಿ ತಿಳಿಸಿದ್ದಾರೆ.

ಮೊಹಮ್ಮದ್ ಶಮಿ ದೇಶೀಯ ಟೂರ್ನಿಗಳಲ್ಲೂ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಬಂಗಾಳ ಪರ ಆಡುವ ಶಮಿ ರಣಜಿ ಟ್ರೋಫಿಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ಸೆಮಿಫೈನಲ್ ಪಂದ್ಯದಲ್ಲಿ 8 ವಿಕೆಟ್ ಪಡೆದಿದ್ದಾರೆ. ಇವರಲ್ಲಿ ಇನ್ನು ವಿಕೆಟ್ ಕಬಳಿಸುವ ಕ್ಷಮತೆ ಇದೆ ಎಂದು ಗಂಗೂಲಿ ತಿಳಿಸಿದ್ದಾರೆ. ಅಲ್ಲದೆ ಇವರು ದೇಶೀಯ ಟೂರ್ನಿಗಳಲ್ಲಿ ಆಡುವುದನ್ನು ಮುಂದುವರೆಸಬೇಕು. ಹೊಸ ಚೆಂಡಿನೊಂದಿಗೆ ಶಮಿ ಪರಿಣಾಮಕಾರಿ ಎಂದು ಮಾಜಿ ನಾಯಕ ಹೇಳಿದ್ದಾರೆ.
ಕಳೆದ ನಾಲ್ಕು ತಿಂಗಳಲ್ಲಿ ಸತತ ಬೌಲಿಂಗ್ ಮಾಡುತ್ತಿರುವುದನ್ನು ನೋಡಿದರೆ, ಇವರು ಫಿಟ್ ಆಗಿದ್ದಾರೆ ಎನಿಸುತ್ತದೆ. ಇವರ ಇತ್ತೀಚಿನ ಪ್ರದರ್ಶನ ನೋಡಿದರೆ ಟೀಮ್ ಇಂಡಿಯಾಕ್ಕೆ ಕಮ್‌ಬ್ಯಾಕ್ ಮಾಡಬೇಕು ಎಂದು ಸೌರವ್ ಗಂಗೂಲಿ ಆಯ್ಕೆ ಸಮಿತಿಗೆ ಒತ್ತಾಯಿಸಿದ್ದಾರೆ. ಅವರು ಮತ್ತೆ ಬ್ಲ್ಯೂ ಜೆರ್ಸಿಯಲ್ಲಿ ಮಿಂಚಬೇಕು ಎನ್ನುವ ಆಸೆ ನನ್ನದು ಎಂದಿದ್ದಾರೆ.
ಮೊಹಮ್ಮದ್ ಶಮಿ ಕಳೆದ ದೇಶೀಯ ಋತುವಿನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ರಣಜಿ ಟ್ರೋಫಿ, ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೇರಿ ಒಟ್ಟು 67 ವಿಕೆಟ್ ಕಬಳಿಸಿದ್ದಾರೆ. ಇವರು ಒಂದು ವರ್ಷದಿಂದ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದಾರೆ.