ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿ "ಎ" ಗುಂಪಿನ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಈಗಾಗಲೇ ಎರಡೂ ತಂಡಗಳು ಸೆಮಿಫೈನಲ್ ಹಂತ ತಲುಪಿವೆ. ಆದರೆ ಯಾವ ತಂಡ ಅಗ್ರ ಸ್ಥಾನವನ್ನು ಪಡೆಯಲಿದೆ ಎಂಬ ಪ್ರಶ್ನೆಗೆ ಭಾನುವಾರ ಉತ್ತರ ಸಿಗಲಿದೆ. ಉಭಯ ತಂಡಗಳು ಈ ಟೂರ್ನಿಯಲ್ಲಿ ತಲಾ 4 ಅಂಕಗಳನ್ನು ಕಲೆ ಹಾಕಿವೆ. ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಅಂತೆಯೇ ಟೀಮ್ ಇಂಡಿಯಾದ ಸ್ವಿಂಗ್ ಬೌಲರ್ ಮೊಹಮ್ಮದ್ ಶಮಿ ಸಹ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಬ್ಬರದ ಆರಂಭವನ್ನು ಮಾಡಿದ್ದ ಶಮಿ, ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದರು. ಆದರೆ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಸಾಧನೆ ಮಾಡಿದ್ದರು. ಆದರೆ ಪಾಕ್ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಬೇಟೆ ನಡೆಸುವಲ್ಲಿ ಹಿಂದೆ ಬಿದ್ದಿದ್ದರು. ಇವರು ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ವಿಕೆಟ್ ಬೇಟೆ ನಡೆಸಿ ದಾಖಲೆಯ ಪುಟಕ್ಕೆ ಎಂಟ್ರಿ ಪಡೆಯುವ ಪ್ಲ್ಯಾನ್ ಮಾಡಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ವೇಗವಾಗಿ 200 ವಿಕೆಟ್‌ಗಳನ್ನು ಪಡೆದಿರುವ ಶಮಿ ಕಿವೀಸ್ ವಿರುದ್ಧ ಮತ್ತೊಂದು ಸಾಧನೆ ಮಾಡುವ ಉತ್ಸಾಹದಲ್ಲಿದ್ದಾರೆ. ಈ ಪಂದ್ಯದಲ್ಲಿ ಮೂರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ, ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆಗೂ ಸ್ಥಾನ. ಇವರು 31 ಪಂದ್ಯಗಳಲ್ಲಿ 39 ವಿಕೆಟ್ ಪಡೆದಿದ್ದಾರೆ. ಈ ದಾಖಲೆಯ ಮೇಲೆ ಶಮಿ ಕಣ್ಣು ನೆಟ್ಟಿದ್ದಾರೆ.
ಈಗಾಗಲೇ ಶಮಿ ನ್ಯೂಜಿಲೆಂಡ್ ವಿರುದ್ಧ ಸ್ಥಿರ ಪ್ರದರ್ಶನ ನೀಡಿದ ಬೌಲರ್. ಇವರು ಆಡಿದ 14 ಪಂದ್ಯಗಳಲ್ಲಿ 37 ವಿಕೆಟ್ ಕಬಳಿಸಿದ್ದಾರೆ. ಈ ವೇಳೆ ಮೂರು ಬಾರಿ ನಾಲ್ಕಕ್ಕು ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಭಾನುವಾರದ ಪಂದ್ಯದಲ್ಲಿ ಶಮಿ ಮೂರು ವಿಕೆಟ್ ಪಡೆಯುವಲ್ಲಿ ಸಫಲರಾದರೆ, ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಅಳಿಸಿ ಹಾಕಬಲ್ಲರು. ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಕರ್ನಾಟಕದ ಜಾವಗಲ್ ಶ್ರೀನಾಥ್ ಅವರಿಗೆ ಸಲ್ಲುತ್ತದೆ. ಇವರು ಆಡಿದ 30 ಪಂದ್ಯಗಳಲ್ಲಿ 51 ವಿಕೆಟ್ ಕಬಳಿಸಿದ್ದಾರೆ.

ಜಾವಗಲ್ ಶ್ರೀನಾಥ್, 30 ಪಂದ್ಯ, 51 ವಿಕೆಟ್
ಅನಿಲ್ ಕುಂಬ್ಳೆ, 31 ಪಂದ್ಯ, 39 ವಿಕೆಟ್
ಮೊಹಮ್ಮದ್ ಶಮಿ, 14 ಪಂದ್ಯ, 37 ವಿಕೆಟ್
ಕಪಿಲ್ ದೇವ್, 29 ಪಂದ್ಯ, 33 ವಿಕೆಟ್
ಜಾಹೀರ್ ಖಾನ್, 22 ಪಂದ್ಯ, 30 ವಿಕೆಟ್