ಭಾರತ ಹಾಗೂ ಬಾಂಗ್ಲಾದೇಶ ನಡುವಣ ಟೆಸ್ಟ್ ಸರಣಿ ಮುಗಿದಿದೆ. ಈಗ ಉಭಯ ತಂಡಗಳ ನಡುವೆ ಟಿ20 ಸರಣಿ ಆಡಬೇಕಿದೆ. ಇದಾದ ಬಳಿಕ ರೋಹಿತ್ ಪಡೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ತದ ನಂತರ ಬಹು ನಿರೀಕ್ಷಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ತಂಡಕ್ಕೆ ಮರಳ ಬಹುದು ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ ಅವರ ಗಾಯದ ಕುರಿತಾದ ಬಿಗ್ ಅಪ್‌ಡೇಟ್ ಸಿಕ್ಕಿದೆ.
ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನವನ್ನು ನೀಡಿದ್ದ ಮೊಹಮ್ಮದ್ ಶಮಿ ಅಬ್ಬರಿಸಿದ್ದರು. ತಮ್ಮ ಮೊನಚಾದ ದಾಳಿಯ ಮೂಲಕ ಎದುರಾಳಿಗಳಿಗೆ ಕಾಟ ನೀಡಿದ್ದ ಶಮಿ, ವಿಶ್ವಕಪ್‌ನಲ್ಲಿ ಅತಿ ಗರಿಷ್ಠ ವಿಕೆಟ್ ಪಡೆದ ಬೌಲರ್. ಭಾರತದಲ್ಲಿ ನಡೆದ ವಿಶ್ವಕಪ್ ಬಳಿಕ ಮೊಹಮ್ಮದ್ ಶಮಿ ಗಾಯಕ್ಕೆ ತುತ್ತಾದರು. ಅಲ್ಲದೆ ಶಸ್ತ್ರ ಚಿಕಿತ್ಸೆಗೂ ಒಳಗಾದರು. ಈ ವೇಳೆ ಶಮಿ ಹಲವು ತಿಂಗಳು ಮೈದಾನದಿಂದ ದೂರ ಉಳಿದಿದ್ದರು. ಈಗ ಕೆಲವು ದಿನಗಳ ಹಿಂದೆ ಶಮಿ ನೆಟ್ಸ್ ಅಭ್ಯಾಸ ಆರಂಭಿಸಿದ್ದರು. ಆದರೆ ಈಗ ಬಂದಿರುವ ಸುದ್ದಿ ನಿಜಕ್ಕೂ ಶಮಿ ಅಭಿಮಾನಿಗಳ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡವಂತೆ ಮಾಡಿದೆ.

ಗಾಯದಿಂದ ಚೇತರಿಸಿಕೊಳ್ಳಲು ರಿಹ್ಯಾಬ್‌ಗೆ ಒಳಗಾಗಿದ್ದ ಶಮಿ ಮತ್ತೆ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬಹು ನಿರೀಕ್ಷಿತ ಬಾರ್ಡರ್ ಗವಾಸ್ಕರ್ ಟ್ರೋಫಿಗೂ ಮುನ್ನ ವೇಗಿ ಅಂಗಳ ಪ್ರವೇಶಿಸುತ್ತಾರೆ ಎಂದು ಅಂದಾಜಿಸಲಾಗಿತ್ತು. ಅಲ್ಲದೆ ಇದಕ್ಕೆ ಪೂರಕವಾಗಿ ಶಮಿ ಸಹ ದೇಶೀಯ ಟೂರ್ನಿಯಲ್ಲಿ ಆಡುವ ಬಯಕೆಯನ್ನು ಸಹ ವ್ಯಕ್ತ ಪಡಿಸಿದ್ದರು. ಪಶ್ಚಿಮ್ ಬಂಗಾಳ ಪರ ಶಮಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವುದಾಗಿ ಸ್ಪಷ್ಟ ಪಡಿಸಿದ್ದರು. ಆದರೆ ಈಗ ಮತ್ತೆ ಗಾಯಕ್ಕೆ ತುತ್ತಾಗಿದ್ದು, ಚಿಂತೆ ಹೆಚ್ಚಿಸಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ ಹಿಮ್ಮಡಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡು ಶಮಿ ಅಭ್ಯಾಸ ಆರಂಭಿಸಿದ್ದರು. ಈ ವೇಳೆ ಅವರಿಗೆ ಎರಡನೇ ಬಾರಿ ಗಾಯವಾಗಿದೆ. ಅಲ್ಲದೆ ಶಮಿ ಅವರ ಕಾಲು ಬಾವು ಬಂದಿರುವುದಾಗಿ ವರದಿಯಲ್ಲಿ ತಿಳಿಸಿದೆ. ಶಮಿ ಬೌಲಿಂಗ್ ಆರಂಭಿಸಿದ್ದರು ಮತ್ತು ಕ್ರಿಕೆಟ್‌ಗೆ ಮರಳುವ ಸಿದ್ಧರಾಗಿದ್ದರು. ಆದರೆ ಇತ್ತೀಚೆಗೆ ಅವರ ಮೊಣಕಾಲಿನ ಗಾಯವು ಮತ್ತೆ ಉಲ್ಬಣಗೊಂಡಿತು. ಹೀಗಾಗಿ ಬಿಸಿಸಿಐ ವೈದ್ಯಕೀಯ ತಂಡವು ಅವರ ಗಾಯದ ಮೇಲೆ ನಿಗಾ ವಹಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ ಮೂರು ಫಾರ್ಮೆಟ್‌ಗಳನ್ನು ಆಡುವ ಆಟಗಾರ. ಈ ವರೆಗೆ ಶಮಿ 64 ಟೆಸ್ಟ್ ಪಂದ್ಯಗಳ 122 ಇನಿಂಗ್ಸ್‌ಗಳಲ್ಲಿ 229 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ 101 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 195 ವಿಕೆಟ್ ಪಡೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲೂ ಇವರ ಸಾಧನೆ ಅಮೋಘವಾಗಿದೆ. ಇವರು 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಕಿತ್ತಿದ್ದಾರೆ.