ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಇನ್ನು ಭಾರತ ತಂಡವನ್ನು ಪ್ರಕಟಿಸಬೇಕಿದೆ. ಈ ಸರಣಿ ನವೆಂಬರ್ ತಿಂಗಳಿನಲ್ಲಿ ಆರಂಭವಾಗುತ್ತದೆ. ಈ ಸರಣಿಯಲ್ಲಿ ಸ್ಥಾನ ಪಡೆಯುವ ಕನಸುನ್ನು ಹಲವು ಆಟಗಾರರು ಕಾಣುತ್ತಿದ್ದಾರೆ. ಭಾರತ ಟೆಸ್ಟ್ ತಂಡದಿಂದ ಹೊರಗುಳಿದಿರುವ ಆಟಗಾರರು ಸಹ ಈ ಸರಣಿಯಲ್ಲಿ ಕಂ ಬ್ಯಾಕ್ ಮಾಡುವ ಕನಸು ಹೊಂದಿದ್ದಾರೆ. ಈ ಲೀಸ್ಟ್ ಪ್ಲೇಯಿಂಗ್ ಇಲೆವೆನ್‌ಗಿಂತಲೂ ದೊಡ್ಡದಾಗಿದೆ. ಇದೇ ಸಾಲಿನಲ್ಲಿ ಕಾಣಿಸಿಕೊಳ್ಳುವ ಇನ್ನೊಬ್ಬ ಆಟಗಾರ ಸದ್ಯ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಆಯ್ಕೆದಾರರ ಗಮನ ಸೆಳೆಯುತ್ತಿದ್ದಾರೆ.
ಕಳೆದ ವಾರದಿಂದ ದೇಶೀಯ ಟೂರ್ನಿ ಆರಂಭವಾಗಿದೆ. ಟೆಸ್ಟ್ ತಂಡಕ್ಕೆ ಕಂ ಬ್ಯಾಕ್ ಮಾಡುವ ಆಸೆಯನ್ನು ಹೊಂದಿರುವ ಆಟಗಾರರಿಗೆ ಇದು ಬೆಸ್ಟ್ ಚಾನ್ಸ್. ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಅಮೋಘ ಪ್ರದರ್ಶನ ನೀಡಿ ಗಾಯದ ಕಾರಣದಿಂದ ಮೈದಾನದಿಂದ ಬಹು ಕಾಲ ದೂರ ಉಳಿದಿದ್ದ ಸ್ವಿಂಗ್ ಬೌಲರ್ ಮೊಹಮ್ಮದ್ ಶಮಿ, ಈಗ ರಣಜಿ ಟ್ರೋಫಿಯಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ತಮ್ಮಲ್ಲಿ ಇನ್ನು ಕ್ಷಮತೆ ಇರುವುದಾಗಿ ಸಾಬೀತು ಪಡಿಸುತ್ತಿದ್ದಾರೆ.

ಮೊಹಮ್ಮದ್ ಶಮಿ ಬಂಗಾಳ ಕ್ರಿಕೆಟ್ ತಂಡದ ಪರ ರಣಜಿ ಟ್ರೋಫಿಯಲ್ಲಿ ಬೌಲಿಂಗ್ ನಡೆಸುತ್ತಿದ್ದಾರೆ. ಇವರು ಆಡಿದ ಎರಡೂ ಪಂದ್ಯಗಳಲ್ಲೂ ಕಮಾಲ್ ಪ್ರದರ್ಶನ ನೀಡಿದ್ದು ಅಭಿಮಾನಿಗಳ ಮನ ಗೆದ್ದಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ "ಸಿ" ಗುಂಪಿನ ಪಂದ್ಯದಲ್ಲಿ ಬಂಗಾಳ 141 ರನ್‌ಗಳಿಂದ ಗುಜರಾತ್ ತಂಡವನ್ನು ಸೋಲಿಸುವಲ್ಲಿ ಶಮಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 44 ರನ್ ನೀಡಿ 3 ವಿಕೆಟ್ ಕಬಳಿಸಿದ್ದ ಶಮಿ, ಎರಡನೇ ಇನಿಂಗ್ಸ್‌ನಲ್ಲಿ 38 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ. ಈ ಮೂಲಕ ರಣಜಿ ಟೂರ್ನಿಯಲ್ಲಿ ಆರ್ಭಟ ಮುಂದುವರೆಸಿದ್ದಾರೆ.
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಬಂಗಾಳ, ಉತ್ತರಾಖಂಡ ತಂಡವನ್ನು ಎದುರಿಸಿತು. ಈ ವೇಳೆ ಶಮಿ ಮೊದಲ ಇನಿಂಗ್ಸ್‌ನಲ್ಲಿ 3, ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಬಳಿಸಿ ಅಬ್ಬರಿಸಿದ್ದರು. ಇವರು ಸ್ಥಿರ ಪ್ರದರ್ಶನಕ್ಕಾಗಿ ಆ ಪಂದ್ಯದಲ್ಲಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಲಭಿಸಿತ್ತು. ಈ ಮೂಲಕ ಶಮಿ ಆಡಿರುವ ಎರಡೂ ಪಂದ್ಯಗಳಲ್ಲಿ 10.46ರ ಸರಾಸರಿಯಲ್ಲಿ 15 ವಿಕೆಟ್ ಪಡೆದು, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಮೊಹಮ್ಮದ್ ಶಮಿ ಓವಲ್‌ನಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದು ಕೊನೆಯ ಟೆಸ್ಟ್ ಪಂದ್ಯವಾಗಿದೆ. ಅಲ್ಲಿಂದ ಇವರು ಬಿಳಿ ಜೆರ್ಸಿ ತೊಡುವ ಆಸೆ ಹೊಂದಿದ್ದಾರೆ. ಈಗಾಗಲೇ ಇವರು ಭಾರತದ ಪರ 64 ಟೆಸ್ಟ್ ಪಂದ್ಯಗಳನ್ನು ಆಡಿದ್ದು 229 ವಿಕೆಟ್ ಪಡೆದಿದ್ದಾರೆ. ಶಮಿ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಸಿಗುತ್ತದಾ ಎಂದು ಕಾದು ನೋಡಬೇಕಿದೆ.