
ಬ್ರಿಸ್ಬೇನ್: ಭಾರತದ ವೇಗಿ ಮೊಹಮ್ಮದ್ ಸಿರಾಜ್ ವಿಶಿಷ್ಠ ದಾಖಲೆಗೆ ಕಾರಣರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಪಡೆದಿರುವ ಸಿರಾಜ್ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇದರೊಂದಿಗೆ ಭಾರತದ ಮಾಜಿ ವೇಗಿ, ಕನ್ನಡಿಗ ಜಾವಗಲ್ ಶ್ರೀನಾಥ್ ಹೆಸರಿನಲ್ಲಿದ್ದ ದಾಖಲೆಯೊಂದು ಬದಿಗೆ ಸರಿದಿದೆ.
ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ನ ಆಸ್ಟ್ರೇಲಿಯಾದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ 73 ರನ್‌ಗೆ 5 ವಿಕೆಟ್ ಮುರಿದಿದ್ದರು. ಸಿರಾಜ್ ಟೆಸ್ಟ್ ವೃತ್ತಿ ಬದುಕಿನಲ್ಲಿ ಮಾಡಿದ ಅಪೂರ್ವ ಸಾಧನೆಯಿದು. ಅಷ್ಟೇ ಅಲ್ಲ ಪಾದಾರ್ಪಣೆ ಮಾಡಿದ ಸರಣಿಯಲ್ಲಿ ಸಿರಾಜ್ ಅತ್ಯಧಿಕ ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ.
ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಮೂಲಕ ಟೆಸ್ಟ್‌ಗೆ ಪಾದಾರ್ಪಣೆ ಮಾಡಿರುವ ಸಿರಾಜ್ ಸರಣಿಯಲ್ಲಿ ಒಟ್ಟಿಗೆ 13 ವಿಕೆಟ್ ಪಡೆದಿದ್ದಾರೆ. ಭಾರತೀಯರಲ್ಲಿ ಪಾದಾರ್ಪಣೆಯ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ದಾಖಲೆ ಜಾವಗಲ್ ಶ್ರೀನಾಥ್ ಹೆಸರಿನಲ್ಲಿತ್ತು. 1991-92ರಲ್ಲಿ ಶ್ರೀನಾಥ್ ಪಾದಾರ್ಪಣೆ ಮಾಡಿದ್ದ ಸರಣಿಯಲ್ಲಿ ಒಟ್ಟು 10 ವಿಕೆಟ್ ಪಡೆದು ಈ ದಾಖಲೆ ಬರೆದಿದ್ದರು.
ಅಷ್ಟೇ ಅಲ್ಲ, ಸಿರಾಜ್‌ಗೆ ಇನ್ನೊಂದು ದಾಖಲೆ ಬರೆಯಲು ಅವಕಾಶವಿತ್ತು. ಸಿರಾಜ್ ಈಗ ಗಬ್ಬಾ ಸ್ಟೇಡಿಯಂನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತದ ವೇಗಿಗಳಲ್ಲಿ ಎರಡನೆಯ ಸ್ಥಾನ ಪಡೆದುಕೊಂಡಿದ್ದಾರೆ. ಸಿರಾಜ್ 73 ರನ್‌ಗೆ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಪಡೆದಿದ್ದರೆ, ಮೊದಲ ಸ್ಥಾನದಲ್ಲಿರುವ ಮದನ್ ಲಾಲ್ ಅವರು 1977ರಲ್ಲಿ 72 ರನ್‌ಗೆ 5 ವಿಕೆಟ್ ಮುರಿದಿದ್ದರು.