ಆಸ್ಟ್ರೇಲಿಯಾ ಪ್ರವಾಸ ಬೆಳೆಸಿರುವ ಇಂಗ್ಲೆಂಡ್ ತಂಡದ ಪ್ರದರ್ಶನ ನೀರಸವಾಗಿದೆ. ಇನ್ನು ಎರಡು ಟೆಸ್ಟ್ ಸರಣಿಗಳು ಬಾಕಿ ಇದ್ದಾಗಲೇ ಇಂಗ್ಲೆಂಡ್, ಮತ್ತೊಮ್ಮೆ ಆಶಸ್ ಸರಣಿಯನ್ನು ಸೋತಿದೆ. ತಂಡದ ಈ ಪ್ರದರ್ಶನದ ಬಳಿಕ ಹೆಡ್ ಕೋಚ್ ಬ್ರೆಂಡನ್ ಮೆಕಲಂ ಬಗ್ಗೆ ಟೀಕೆಗಳು ಕೇಳಿ ಬಂದಿವೆ. ಸ್ಟೋಕ್ಸ್ ಪಡೆ ಮೊದಲ ಮೂರು ಪಂದ್ಯಗಳನ್ನು ಸೋತು ನಿರಾಸೆ ಅನುಭವಿಸಿದೆ. ಇಷ್ಟು ದಿನ ಬೆನ್ನು ಹತ್ತಿದ್ದ ತಂತ್ರದ ವಿರುದ್ಧ ಈಗ ಪ್ರಶ್ನೆಗಳು ಎದ್ದಿವೆ.
ಇಂಗ್ಲೆಂಡ್ ತಂಡ ಕಳೆದ ಕೆಲವು ವರ್ಷಗಳಿಂದ ಬಾಜ್‌ಬಾಲ್ ತಂತ್ರವನ್ನು ಅಳವಡಿಸಿಕೊಂಡು ಬಂದಿತ್ತು. ಆದರೆ ಈ ತಂತ್ರ ಈಗ ಕೈ ಕೊಟ್ಟಂತೆ ಕಾಣುತ್ತಿದೆ. ಹೀಗಾಗಿ ಇಂಗ್ಲೆಂಡ್ ಕೋಚ್ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದ್ದು, ಇವರ ಸ್ಥಾನಕ್ಕೆ ಬೇರೆ ಕೋಚ್ ಹುಡುಕಾಟ ನಡೆದಿದೆ. ಈ ಬಗ್ಗೆ ಇಂಗ್ಲೆಂಡ್ ಮಾಜಿ ಆಟಗಾರ ಮಾಂಟಿ ಪನೇಸರ್ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.

ಪತ್ರಕರ್ತ ರವಿ ಬಿಶ್ತ್ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾಂಟಿ ಪನೇಸರ್ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಇಂಗ್ಲೆಂಡ್ ಮಾಜಿ ಆಟಗಾರನ ಪ್ರಕಾರ ಬ್ರೆಂಡಮ್ ಸ್ಥಾನಕ್ಕೆ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಉತ್ತಮ ಆಯ್ಕೆ ಎಂದು ತಿಳಿಸಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾವನ್ನು ಹೇಗೆ ಸೋಲಿಸಬೇಕು? ಆಸೀಸ್ ತಂಡದ ನ್ಯೂನತೆ ಏನು? ಎಂಬುದೆಲ್ಲಾ ಯಾರಿಗೆ ತಿಳಿದಿದೆಯೋ ಅವರು ಇಂಗ್ಲೆಂಡ್ ಕೋಚ್ ಆಗಬಹುದು. ಹೀಗಾಗಿ ರವಿ ಶಾಸ್ತ್ರಿ ಇಂಗ್ಲೆಂಡ್‌ನ ಮುಂದಿನ ಮುಖ್ಯ ಕೋಚ್ ಆಗಬೇಕು ಎಂದು ಅವರು ಹೇಳಿದ್ದಾರೆ.
ಬ್ರೆಂಡನ್ ಮೆಕಲಂ ಅವರನ್ನು ಇಂಗ್ಲೆಂಡ್ 2022ರಲ್ಲಿ ಕೋಚ್ ಆಗಿ ನೇಮಿಸಿತ್ತು. ಆಗ ಇಂಗ್ಲೆಂಡ್ ಆಶಸ್ ಸರಣಿಯನ್ನು 4-0ಯಿಂದ ಸೋತಿತ್ತು. ಇವರು ಆಗಮಿಸುತ್ತಿದ್ದಂತೆ ನಾಯಕ ಬೆನ್ ಸ್ಟೋಕ್ಸ್ ಹಾಗೂ ತಂಡದ ಇತರ ಆಟಗಾರರ ಮನಸ್ಥಿತಿಯನ್ನು ಬದಲಾವಣೆ ಮಾಡಿದರು. ಇವರು ಕೋಚ್ ಆಗಿ ನೇಮಕ ಆಗುತ್ತಿದ್ದಂತೆ ಆಡಿದ ಮೊದಲ 11 ಟೆಸ್ಟ್ ಪಂದ್ಯಗಳಲ್ಲಿ 10 ರಲ್ಲಿ ಜಯ ಸಾಧಿಸಿ ವಿಶ್ವ ಕ್ರಿಕೆಟ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಮುಂದೆ ಆಡಿದ 33 ಪಂದ್ಯಗಳಲ್ಲಿ ಇಂಗ್ಲೆಂಡ್ 16ರಲ್ಲಿ ಸೋಲು ಕಂಡಿತು. ಬಲಿಷ್ಠ ತಂಡಗಳ ವಿರುದ್ಧ ಸಾಲು ಸಾಲು ಸೋಲುಗಳು ಕೋಚ್ ಸ್ಥಾನದ ಮೇಲೆ ಪ್ರಶ್ನೆಗಳು ಏಳುವಂತೆ ಮಾಡಿವೆ.
ನನಗೆ ನಿಶ್ಚಿತವಾಗಿಯೂ ಇದು ನನ್ನಮೇಲೆ ಅವಲಂಬಿತವಾಗಿದೆಯಾ ಎಂದು ತಿಳಿದಿಲ್ಲ. ನಾನು ಸದ್ಯ ನನ್ನ ಕರ್ತವ್ಯವನ್ನು ಮಾಡಲು ಬಯಸುತ್ತೇನೆ ಎಂದು ಕೋಚ್ ಮೆಕಲಂ ಸ್ಪಷ್ಟ ಪಡಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ರವಿ ಶಾಸ್ತ್ರಿ ಅವರು ಈ ಮೊದಲು ಕೋಚ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇವರ ಅವಧಿಯಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ತವರಿನಲ್ಲಿ ಮಣಿಸಿತ್ತು.