ಭಾರತದ ಈ ಮೂವರು ಆಟಗಾರರು ಯುವ ಆಟಗಾರರಿಗೆ ಸ್ಥಾನ ಬಿಟ್ಟುಕೊಡುವ ಸಮಯ: ಮಾಂಟಿ ಪನೆಸರ್

ಟಿ20 ವಿಶ್ವಕಪ್ ಮುಕ್ತಾಯವಾಗಿದ್ದು ಇಂಗ್ಲೆಂಡ್ ತಂಡ ಪಾಕಿಸ್ತಾನ ತಂಡದ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದೆ. ಇನ್ನು ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತಕ್ಕೆ ತನ್ನ ಹೋರಾಟವನ್ನು ಅಂತ್ಯಗೊಳಿಸಿದ್ದು ಮತ್ತೊಮ್ಮೆ ವಿಶ್ವಕಪ್ ಗೆಲುವು ಕನಸು ಭಗ್ನವಾಗಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಕೆಲ ಹಿರಿಯ ಆಟಗಾರರು ಯುವ ಆಟಗಾರರಿಗೆ ಅವಕಾಶ ಮಾಡಿಕೊಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮಾಂಟಿ ಪನೆಸರ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಂಟಿ ಪನೆಸರ್ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದ ಭಾರತ ತಂಡದ ಮೂವರು ಅನುಭವಿ ಆಟಗಾರರ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಚುಟುಕು ಮಾದರಿಯಲ್ಲಿ ಟೀಮ್ ಇಂಡಿಯಾ ಮುಂದಿನ ದಿನಗಳಲ್ಲಿ ಐಸಿಸಿ ಟೂರ್ನಿಗಳನ್ನು ಗೆಲ್ಲಬೇಕಾದರೆ ಯುವ ಆಟಗಾರರ ಅಗತ್ಯ ತಂಡಕ್ಕಿದೆ ಎಂದಿರುವ ಮಾಂಟಿ ಪನೆಸರ್ ಅನುಭವಿ ಆಟಗಾರರು ಯುವ ಕ್ರಿಕೆಟಿಗರಿಗೆ ಅವಕಾಶ ಮಾಡಿಕೊಡಬೇಕಿದೆ ಎಂದಿದ್ದಾರೆ.

ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲಿಲ್ಲ
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದಲ್ಲಿ ಭಾಗಿಯಾಗಿದ್ದ ಪ್ರಮುಖ ಮೂವರು ಆಟಗಾರರು ಯುವ ಆಟಗಾರರಿಗೆ ಅವಕಾಶ ಮಾಡಿಕೊಡಲಿ ಎಂದಿದ್ದಾರೆ ಮಾಂಟಿ ಪನೆಸರ್. ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿರುವ ಪನೆಸರ್ "ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ ರೀತಿಯಿಂದಾಗಿ ಭಾರತ ತಂಡ ಎಲ್ಲರಿಗೂ ನಿರಾಸೆ ಮೂಡಿಸಿದೆ. ನನ್ನ ಪ್ರಕಾರ ಕೆಲ ಆಟಗಾರರು ಮುಂದಿನ ದಿನಗಳಲ್ಲಿ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆಯಿದೆ. ಪ್ರಮಾಣಿಕವಾಗಿ ಹೇಳಬೇಕೆಂದರೆ ಸೆಮಿಫೈನಲ್‌ನಲ್ಲಿ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವನ್ನು ಭಾರತ ನೀಡಲಿಲ್ಲ" ಎಂದಿದ್ದಾರೆ ಮಾಂಟಿ ಪನೆಸರ್.

ರೋಹಿತ್ ಸೇರಿ ಮೂವರಿಗೆ ನಿವೃತ್ತಿ ಹೇಳುವ ಸಮಯ
ಮುಂದುವರಿದು ಮಾತನಾಡಿದ ಮಾಂಟಿ ಪನೆಸರ್ "ರೋಹಿತ್, ದಿನೇಶ್ ಕಾರ್ತಿಕ್ ಮತ್ತು ಆರ್ ಅಶ್ವಿನ್ ಟಿ20 ಕ್ರಿಕೆಟ್‌ಗೆ ನಿವೃತ್ತಿ ಹೇಳುವ ಸಮಯ ಬಂದಿದೆ ಎನಿಸುತ್ತದೆ. ಟೀಮ್ ಮ್ಯಾನೇಜ್‌ಮೆಂಟ್ ಖಂಡಿತವಾಗಿಯೂ ಈ ಬಗ್ಗೆ ಮೀಟಿಂಗ್ ಮಾಡಲಿದ್ದು ಈ ಆಟಗಾರರ ಜೊತೆಗೆ ಈ ಕುರಿತಾಗಿ ಚರ್ಚಿಸಲಿದೆ. ಈ ಆಟಗಾರರು ಯುವ ಆಟಗಾರರಿಗೆ ದಾರಿ ಮಾಡಿಕೊಡುವ ಸಮಯವಿದು" ಎಂದಿದ್ದಾರೆ ಮಾಂಟಿ ಪನೆಸರ್.

2024ರ ವಿಶ್ವಕಪ್‌ನಲ್ಲಿಯೂ ಕೊಹ್ಲಿ ಇರಲಿದ್ದಾರೆ
ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಕೂಡ ಮಾಂಟಿ ಪನೆಸರ್ ಮಾತನಾಡಿದ್ದಾರೆ. "ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರು ಎಲ್ಲಾ ಭಾರತೀಯ ಆಟಗಾರ ಪೈಕಿ ದೈಹಿಕವಾಗಿ ಅತ್ಯಂತ ಸಮರ್ಥ ಆಟಗಾರ. ಅವರ ಅದ್ಭುತ ಫಿಟ್‌ನೆಸ್ ಗಮನಿಸಿದರೆ ವಯಸ್ಸು ಕೇವಲ ಅವರಿಗೆ ಸಂಖ್ಯೆ ಮಾತ್ರ ಎನಿಸುತ್ತದೆ. ನೀವು ಅವರನ್ನು 2024ರ ವಿಶ್ವಕಪ್‌ನಲ್ಲಿಯೂ ಕಾಣಬಹುದು" ಎಂದಿದ್ದಾರೆ ಮಾಂಟಿ ಪನೆಸರ್

ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದ ಭಾರತ
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಹೀನಾಯ ಪ್ರದರ್ಶನ ನೀಡಿತ್ತು. ಹಾರ್ದಿಕ್ ಪಾಂಡ್ಯ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅವರ ಅರ್ಧ ಶತಕದ ನೆರವಿನಿಂದಾಗಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ನಿಗದಿಯ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್‌ಗಳನ್ನು ಗಳಿಸಿತ್ತು. ಆದರೆ ಬೌಲಿಂಗ್‌ನಲ್ಲಿ ಮತ್ತಷ್ಟು ಕಳಪೆ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಇಂಗ್ಲೆಂಡ್ ಆರಂಭಿಕರನ್ನು ಔಟ್ ಮಾಡಲು ವಿಫಲವಾಯಿತು. ವಿಕೆಟ್ ಕಳೆದುಕೊಳ್ಳದೆಯೇ ಭಾರತ ತಂಡವನ್ನು ಇಂಗ್ಲೆಂಡ್ ಮಣಿಸಿ ಫೈಲ್‌ಗೆ ಪ್ರವೇಶ ಪಡೆದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications