ಜುಲೈ 12 ಶುಕ್ರವಾರ, ಕನ್ನಡಿಗ ರಾಹುಲ್ ದ್ರಾವಿಡ್ ಬದಲಿಗೆ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೇಮಿಸಿದೆ. ಇದಾದ ಬಳಿಕ ಸಹಾಯಕ ಕೋಚಿಂಗ್ ಸಿಬ್ಬಂದಿಗೆ ಸಂಬಂಧಿಸಿದ ಸುದ್ದಿಗಳು ಹೊರಬರುತ್ತಿವೆ.
ಬಿಸಿಸಿಐ ಜೊತೆಗಿನ ವಿಕ್ರಮ್ ರಾಥೋಡ್, ಪರಸ್ ಮಹಾಂಬ್ರೆ ಮತ್ತು ಟಿ ದಿಲೀಪ್ ಅವರ ಒಪ್ಪಂದದ ಅವಧಿ ಮುಗಿದ ನಂತರ, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಹುದ್ದೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

ಆದಾಗ್ಯೂ, ಭಾರತದ ಮಾಜಿ ಆರಂಭಿಕ ಆಟಗಾರ ಗಂಭೀರ್ ಮುಖ್ಯ ಕೋಚ್ ಆದ ನಂತರ, ಈ ಬಾರಿ ಸಹಾಯಕ ಸಿಬ್ಬಂದಿಯ ರಚನೆಯಲ್ಲಿ ಕೆಲವು ಬದಲಾವಣೆಗಳಾಗಬಹುದು ಎನ್ನಲಾಗುತ್ತಿದೆ. ನೂತನ ಕೋಚ್ ಗಂಭೀರ್ ಅವರ ಸಲಹೆ ಮೇರೆಗೆ ಬಿಸಿಸಿಐ 'ಬ್ಯಾಟಿಂಗ್ ಕೋಚ್' ಹುದ್ದೆಯನ್ನು ರದ್ದುಪಡಿಸಬಹುದು.
ಬದಲಾಗಿ, ಈ ಸ್ಥಾನವನ್ನು 'ಸಹಾಯಕ ಕೋಚ್' ಎಂದು ಹೆಸರಿಸಬಹುದು. ಈ ಹುದ್ದೆಗೆ ಮುಂಚೂಣಿಯಲ್ಲಿರುವವರು ಬೇರೆ ಯಾರೂ ಅಲ್ಲ, ಟೀಮ್ ಇಂಡಿಯಾ ಮತ್ತು ಮುಂಬೈನ ಮಾಜಿ ಆಲ್‌ರೌಂಡರ್ ಅಭಿಷೇಕ್ ನಾಯರ್.
ಇಂತಹ ಪರಿಸ್ಥಿತಿಯಲ್ಲಿ ಗಂಭೀರ್ ಅವರೇ ತಂಡದ ಬ್ಯಾಟಿಂಗ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಬೌಲಿಂಗ್ ಕೋಚ್ ಹುದ್ದೆಗೆ ಕೆಲವರ ಹೆಸರು ರೇಸ್‌ನಲ್ಲಿದೆ. ಭಾರತದ ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿ ಮತ್ತು ಕನ್ನಡಿಗ ಆರ್ ವಿನಯ್ ಕುಮಾರ್ ಅವರಲ್ಲದೆ ಜಹೀರ್ ಖಾನ್ ಹೆಸರು ಕೂಡ ಚರ್ಚೆಯಲ್ಲಿದೆ.
ವರದಿಗಳ ಪ್ರಕಾರ, ಗಂಭೀರ್ ಅವರು ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೋರ್ನೆ ಮೊರ್ಕೆಲ್ ಅವರ ಹೆಸರನ್ನು ಬೌಲಿಂಗ್ ಕೋಚ್ ಹುದ್ದೆಗೆ ಬಿಸಿಸಿಐಗೆ ಶಿಫಾರಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಬಿಸಿಸಿಐ ಈ ಶಿಫಾರಸಿನ ಮೇರೆಗೆ ಕಾರ್ಯನಿರ್ವಹಿಸಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಯಾವುದೇ ಮಾಹಿತಿ ಹೊರ ಬಂದಿಲ್ಲ.
ಗಂಭೀರ್- ಮೊರ್ಕೆಲ್ ಜೋಡಿ
ಗಂಭೀರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್‌ನ ಮಾರ್ಗದರ್ಶಕರಾಗಿದ್ದಾಗ ಮೋರ್ನೆ ಮೊರ್ಕೆಲ್ ಅವರು ಕೂಡ ಬೌಲಿಂಗ್ ಕೋಚ್ ಆಗಿದ್ದರು. ಬಳಿಕ 2024ರ ಆವೃತ್ತಿಯಲ್ಲಿ ಕೆಕೆಆರ್‌ಗೆ ಗಂಭೀರ್ ಮೆಂಟರ್ ಆಗಿ ಹೋದ ಮೇಲೂ ಮಾರ್ಕೆಲ್ ಎಲ್‌ಎಸ್‌ಜಿಯಲ್ಲೇ ಬೌಲಿಂಗ್ ಕೋಚ್ ಆಗಿ ಮುಂದುವರೆದಿದ್ದಾರೆ.
ದಕ್ಷಿಣ ಆಫ್ರಿಕಾ ಪರ 2006 ರಿಂದ 2018 ರ ನಡುವೆ 86 ಟೆಸ್ಟ್, 117 ಏಕದಿನ ಮತ್ತು 44 ಟಿ20 ಪಂದ್ಯಗಳನ್ನು ಮೋರ್ಕೆಲ್ ಆಡಿದ್ದಾರೆ.
ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನ ಸಂದರ್ಭದಲ್ಲಿ ಮೊರ್ಕೆಲ್ ಪಾಕಿಸ್ತಾನ ತಂಡದ ಕೋಚ್ ಆಗಿದ್ದರು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಯೊಂದಿಗಿನ ಒಪ್ಪಂದದ ಅವಧಿ ಮುಗಿಯುವ ಕೆಲವು ತಿಂಗಳುಗಳ ಮೊದಲು ಅವರು ಕೆಳಗಿಳಿದ್ದರು.
ಬಿಸಿಸಿಐ ಮೂಲಗಳ ಪ್ರಕಾರ 'ಎಲ್ಲಾ ಸಹಾಯಕ ಸಿಬ್ಬಂದಿ ಹುದ್ದೆಗಳಿಗೆ ಹಲವು ಹೆಸರುಗಳು ಚರ್ಚೆಯಲ್ಲಿವೆ. ಆದರೆ ಬಿಸಿಸಿಐ ಇನ್ನೂ ಯಾವುದನ್ನೂ ಅಂತಿಮಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಈ ಚರ್ಚೆ ವಿಷಯಗಳು ಹೇಗೆ ಪ್ರಗತಿಯಾಗುತ್ತವೆ ಎನ್ನಲಾಗಿದೆ.