
ದುಬೈ: ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಹೆಸರಿಗೆ ಮತ್ತೊಂದು ದಾಖಲೆ ಸೇರಿಕೊಂಡಿದೆ. ವಿಕೆಟ್ ಕೀಪರ್ ಆಗಿದ್ದುಕೊಂಡು 100 ಕ್ಯಾಚ್‌ಗಳನ್ನು ಪಡೆದ ಆಟಗಾರನಾಗಿ ಧೋನಿ ಗುರುತಿಸಿಕೊಂಡಿದ್ದಾರೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಪಂದ್ಯದಲ್ಲಿ ಧೋನಿ ಈ ಅಪರೂಪದ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಭಾನುವಾರ (ಅಕ್ಟೋಬರ್ 4) ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ (63 ರನ್) ವಿಕೆಟ್ ಪಡೆಯುವ ಮೂಲಕ ಧೋನಿ ದಾಖಲೆ ಪೂರೈಸಿಕೊಂಡಿದ್ದಾರೆ. ಈ ಪಂದ್ಯಕ್ಕೂ ಮುನ್ನ ಧೋನಿ ಹೆಸರಿನಲ್ಲಿ ವಿಕೆಟ್ ಕೀಪರ್ ಆಗಿ 99 ಕ್ಯಾಚ್ ಪಡೆದ ದಾಖಲೆಯಿತ್ತು.
ಐಪಿಎಲ್‌ನಲ್ಲಿ ವಿಕೆಟ್ ಕೀಪರ್ ಅಗಿದ್ದುಕೊಂಡು 100 ವಿಕೆಟ್ ಪಡೆದ ಮೊದಲ ದಾಖಲೆ ಕೋಲ್ಕತ್ತಾ ನೈಟ್ ರೈಡರ್ಸ್‌ನ ದಿನೇಶ್ ಕಾರ್ತಿಕ್ ನಿರ್ಮಿಸಿದ್ದರು. ಕಾರ್ತಿಕ್ ಬಳಿಕ ಈ ಸಾಧನೆ ಮೆರೆದ ಎರಡನೇ ವಿಕೆಟ್ ಕೀಪರ್ ಆಗಿ ಧೋನಿ ಈಗ ಗುರುತಿಸಿಕೊಂಡಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 10 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿದೆ. ಶೇನ್ ವಾಟ್ಸನ್ 83 (53 ಎಸೆತ), ಫಾಫ್ ಡು ಪ್ಲೆಸಿಸ್ 87 (53 ಎಸೆತ) ರನ್ ಸೇರಿಸಿದ್ದರಿಂದ ಸಿಎಸ್‌ಕೆ ಟೂರ್ನಿಯ ಎರಡನೇ ಗೆಲುವು ದಾಖಲಿಸಿದೆ.