ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗ ಅವರು ಉದ್ದನೆಯ ಕೂದಲನ್ನು ಹೊಂದಿದ್ದರು. 2007 ರಲ್ಲಿ ಅವರ ನಾಯಕತ್ವದಲ್ಲಿ ಟಿ 20 ವಿಶ್ವಕಪ್ ಗೆದ್ದ ನಂತರ, ಅಭಿಮಾನಿಗಳು ಟ್ರೋಫಿಯೊಂದಿಗೆ ಧೋನಿ ಅವರ ಲಾಂಗ್ ಕೂದಲನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ.
ಉದ್ದನೆಯ ಕೂದಲಿ ನಿಂದಾಗಿ ಮಾಹಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಧೋನಿ ಮತ್ತೆ ತಮ್ಮ ಕೂದಲನ್ನು ಉದ್ದವಾಗಿ ಇಡಲು ಪ್ರಾರಂಭಿಸಿದ್ದಾರೆ. ಧೋನಿ ಏಕೆ ಉದ್ದ ಕೂದಲಿನೊಂದಿಗೆ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಅವರೇ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಉದ್ದ ಕೂದಲು ಇಟ್ಟುಕೊಳ್ಳಲು ನೀಡಿರುವ ಕಾರಣ ಕೇಳಿ ಮಾಹಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಸಮಾರಂಭವೊಂದರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಉದ್ದನೆಯ ಕೂದಲಿನ ಬಗ್ಗೆ ಕೇಳಿದಾಗ, ಅದರ ಹಿಂದಿನ ಕಾರಣ ಅವರ ಅಭಿಮಾನಿಗಳು ಎಂದು ಹೇಳಿದರು. ತನ್ನನ್ನು ತುಂಬಾ ಇಷ್ಟಪಡುವ ಅಭಿಮಾನಿಗಳಿಗಾಗಿ ಉದ್ದನೆಯ ಕೂದಲನ್ನು ಇಡುತ್ತಿದ್ದೇನೆ ಎಂದು ಮಹಿ ಹೇಳಿದ್ದಾರೆ.
ಉದ್ದ ಕೂದಲಿನಿಂದ ತನಗೆ ಸಾಕಷ್ಟು ತೊಂದರೆಗಳು ಉಂಟಾಗುತ್ತಿದ್ದು, ಸಮಸ್ಯೆ ಹೆಚ್ಚಾದರೆ ಅದನ್ನು ಕೂಡ ಕಡಿಮೆ ಮಾಡುವುದಾಗಿ ಧೋನಿ ಹೇಳಿದ್ದಾರೆ. ಈ ಕೇಶ ವಿನ್ಯಾಸವನ್ನು ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ ಎಂದು ಧೋನಿ ಹೇಳಿದ್ದಾರೆ.
ಈ ಹಿಂದೆ ನಾನು ಕೇವಲ 20 ನಿಮಿಷಗಳಲ್ಲಿ ಜಾಹೀರಾತು ಚಿತ್ರೀಕರಣಕ್ಕೆ ಸಿದ್ಧವಾಗುತ್ತಿದ್ದೆ ಆದರೆ ಈಗ ಅದು ಸುಮಾರು ಒಂದು ಗಂಟೆ 5 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಅಭಿಮಾನಿಗಳು ಇಷ್ಟಪಡುವ ಕಾರಣ ನಾನು ಉದ್ದನೆಯ ಕೂದಲನ್ನು ಇಡುತ್ತಿದ್ದೇನೆ. ಆದರೆ ನನಗೆ ತೊಂದರೆಯಾದರೆ, ನಾನು ಬೆಳಿಗ್ಗೆ ಎದ್ದು ಅದನ್ನು ಕತ್ತರಿಸುತ್ತೇನೆ ಎಂದಿದ್ದಾರೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಕೂಡ ಮಹೇಂದ್ರ ಸಿಂಗ್ ಧೋನಿ ಅವರ ಉದ್ದನೆಯ ಕೂದಲಿನ ಫ್ಯಾನ್ ಆಗಿದ್ದರು. 2004-05ರಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸಕ್ಕೆ ತೆರಳಿದ್ದಾಗ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಏಕದಿನ ಪಂದ್ಯದ ಬಳಿಕ ಪರ್ವೇಜ್ ಮುಷರಫ್ ಧೋನಿಗೆ ಈ ಹೇರ್ ಸ್ಟೈಲ್ ನಲ್ಲಿ ಚೆನ್ನಾಗಿ ಕಾಣ್ತೀರಿ, ಕಟ್ ಮಾಡಿಕೊಳ್ಳಬೇಡಿ ಎಂದು ಹೇಳಿದ್ದರು. ಆ ಪಂದ್ಯದಲ್ಲಿ ಧೋನಿ 46 ಎಸೆತಗಳಲ್ಲಿ 72 ರನ್ ಗಳಿಸಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದರು.
ಮಹೇಂದ್ರ ಸಿಂಗ್ ಧೋನಿ ಐಪಿಎಲ್ 17ನೇ ಸೀಸನ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಧೋನಿ ಉದ್ದನೆಯ ಕೂದಲಿನೊಂದಿಗೆ ಮೈದಾನಕ್ಕೆ ಬರಬಹುದು. ಮಾಹಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿದೆ.

ಜನವರಿಯಿಂದ ಮಹಿ ಐಪಿಎಲ್‌ಗೆ ತಯಾರಿ ಆರಂಭಿಸಬಹುದು. ಇತ್ತೀಚೆಗಷ್ಟೇ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥ್ ಅವರು ಧೋನಿ ಸದ್ಯ ಉತ್ತಮ ಮನಸ್ಥಿತಿಯಲ್ಲಿದ್ದು, ಜನವರಿಯಲ್ಲಿ ನೆಟ್ಸ್‌ನಲ್ಲಿ ಅಭ್ಯಾಸವನ್ನು ಪ್ರಾರಂಭಿಸಬಹುದು ಎಂದು ಹೇಳಿದ್ದರು. ಧೋನಿ ಸದ್ಯ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ.