ಧೋನಿ ಪರ ಆಸೀಸ್ ಸ್ಟಾರ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಮಾಡಿದ್ದೇಕೆ?!

ವಿಶಾಖಪಟ್ನಂ, ಫೆಬ್ರವರಿ 25: ವಿಶಾಖಪಟ್ನಂನಲ್ಲಿ ಭಾನುವಾರ (ಫೆಬ್ರವರಿ 24) ನಡೆದ ಭಾರತ-ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯದಲ್ಲಿ ಭಾರತ 3 ವಿಕೆಟ್‌ಗಳಿಂದ ಸೋತಿತ್ತು. ಭಾರತದ ಹಿನ್ನಡೆಗೆ ಎಂಎಸ್ ಧೋನಿಯ ನಿಧಾನಗತಿಯ ಬ್ಯಾಟಿಂಗ್ ಕಾರಣ ಎಂದು ಕ್ರಿಕೆಟ್ ಅಭಿಮಾನಿಗಳು ಟೀಕಿಸಿದ್ದರು. ಆದರೆ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಧೋನಿ ಬೆಂಬಲಕ್ಕೆ ನಿಂತಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 20 ಓವರ್‌ಗೆ 126 ರನ್ ಪೇರಿಸಿತು. ಧೋನಿ 37 ಎಸೆತಗಳಿಗೆ 29 ರನ್ ಬಾರಿಸಿದ್ದರು. ಆದರೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ರೋಚಕ ಗೆಲುವನ್ನಾಚರಿಸಿತು. ಅಂತಿಮ ಎಸೆತಕ್ಕೆ 127 ರನ್ ಗುರಿ ಮುಟ್ಟುವ ಮೂಲಕ ಆಸೀಸ್ ಫಲಿತಾಂಶವನ್ನು ತನ್ನಡೆಗೆ ತಂದುಕೊಂಡಿತ್ತು.
ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪ್ರಕಾರ ಧೋನಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರೆ ಭಾರತ ಗೆಲ್ಲುತ್ತಿತ್ತು. ಆದರೆ ಮ್ಯಾಕ್ಸ್‌ವೆಲ್, ಅಂಥ ಪರಿಸ್ಥಿತಿಯಲ್ಲಿ ಧೋನಿ ಜಾಗದಲ್ಲಿ ಯಾರೇ ಇದ್ದರೂ ಹೆಚ್ಚು ರನ್ ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

ಗೆಲುವಿನ ರುವಾರಿ ಮ್ಯಾಕ್ಸ್‌ವೆಲ್
ವಿಶಾಖಪಟ್ನಂ ಪಂದ್ಯದಲ್ಲಿ ಆಸೀಸ್ ಗೆಲ್ಲಲು ಕಾರಣ ಮ್ಯಾಕ್ಸ್‌ವೆಲ್ ರನ್ ಕೊಡುಗೆ. 43 ಎಸೆತಗಳಿಗೆ ಗ್ಲೆನ್ 56 ರನ್ ಬಾರಿಸಿದ್ದರು. ಅಂತಿಮ ಕ್ಷಣದಲ್ಲಿ ಆಸೀಸ್ ಚೇಸಿಂಗ್‌ಗೆ ನೆರವಾಗಿದ್ದು ಮ್ಯಾಕ್ಸ್‌ವೆಲ್ ರನ್ ಕೊಡುಗೆಯೆ. ಆದರೆ ಪಂದ್ಯ ಮತ್ತು ಮೈದಾನದ ವಾಸ್ತವ ಸ್ಥಿತಿಯ ಬಗ್ಗೆ ಅರಿವಿರುವುದರಿಂದ ಮ್ಯಾಕ್ಸ್‌ವೆಲ್ ಧೋನಿ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಅಂದುಕೊಂಡಷ್ಟು ಸುಲಭವಲ್ಲ
'ಇದು (ಧೋನಿಯ ಸ್ಲೋ ಸ್ಟ್ರೈಕ್ ರೇಟ್) ನಿಜ ಹೇಳಬೇಕೆಂದರೆ ನ್ಯಾಯಯುತವಾಗಿಯೇ ಇದೆ. ಯಾಕೆಂದರೆ ಲೋ ಮತ್ತು ಸ್ಲೋ ಪಿಚ್‌ನಲ್ಲಿ ರನ್‌ಗಳಿಸೋದು ಅಂದುಕೊಂಡಷ್ಟು ಸುಲಭವಲ್ಲ. ಅಂಥ ಸಂದರ್ಭಗಳಲ್ಲಿ ಯಾವ ಬ್ಯಾಟ್ಸ್ಮನ್‌ಗೂ ರನ್ ಗಳಿಸೋದು ಕಷ್ಟವಾಗೇ ಆಗುತ್ತಿತ್ತು' ಎಂದು ಗ್ಲೆನ್ ಹೇಳಿದ್ದಾರೆ.

ಅಂತಿಮ ಓವರ್‌ನಲ್ಲಿ ಸಿಕ್ಸ್
'ಎಂಎಸ್ ಧೋನಿ ಬೆಸ್ಟ್ ಫಿನಿಷಿಂಗ್‌ಗಾಗಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡವರು. ಆದರೆ ಧೋನಿ ಬ್ಯಾಟಿಂಗ್‌ಗಾಗಿ ಕಷ್ಟಪಡುತ್ತಿದ್ದುದೂ ನಾವು ಗಮನಿಸಿದ್ದೇವೆ. ಅದರರ್ಥ ಧೋನಿ ದೊಡ್ಡ ಹೊಡೆತಕ್ಕೆ ಯತ್ನಿಸುತ್ತ ಹಿನ್ನಡೆ ಅನುಭವಿಸುತ್ತಿದ್ದುದು ಸ್ಪಷ್ಟ. ಆದಾಗ್ಯೂ ಧೋನಿ ಅಂತಿಮ ಓವರ್‌ನಲ್ಲಿ ಸಿಕ್ಸ್ ಬಾರಿಸಿದ್ದರು' ಎಂದು ಮ್ಯಾಕ್ಸ್‌ವೆಲ್ ವಿವರಿಸಿದರು.

ಉಮೇಶ್ ಯಾದವ್‌ಗೂ ಟೀಕೆ
ಪಂದ್ಯದ ಸೋಲಿಗೆ ಉಮೇಶ್ ಯಾದವ್ ಅವರನ್ನೂ ಹೊಣೆಯನ್ನಾಗಿಸಲಾಗಿತ್ತು. ಕಾರಣ ವೇಗಿ ಉಮೇಶ್ ಯಾದವ್ ಅಂತಿಮ ಓವರ್ ಎಸೆದಿದ್ದರು. ವಾಸ್ತವವಾಗಿ ಭಾರತದ ಉಳಿದ ಬ್ಯಾಟ್ಸ್ಮನ್‌ಗಳ ವೈಫಲ್ಯವೂ ಸೋಲಿಗೆ ಕಾರಣ. ರೋಹಿತ್ ಶರ್ಮಾ, ರಿಷಬ್ ಪಂತ್, ಕೃನಾಲ್ ಪಾಂಡ್ಯ, ದಿನೇಶ್ ಕಾರ್ತಿಕ್ ಐದು ರನ್‌ನೊಳಗೆ ವಿಕೆಟ್ ನೀಡಿದ್ದರು. ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಆಸೀಸ್ ಬ್ಯಾಟ್ಸ್ಮನ್‌ಗಳು ಕೂಡ ಬ್ಯಾಟಿಂಗ್ ವೇಳೆ ಹೆಣಗಾಡಿದ್ದರು ನಿಜ. ಅಲ್ಲಿಗೆ ಅದು ಬೌಲಿಂಗ್ ಪಿಚ್ ಅನ್ನೋದು ಖರೆ. ಇದೇ ಕಾರಣಕ್ಕೆ ಆಸೀಸ್ ಸುಲಭ ಜಯ ಸಾಧಿಸದೆ, ಪಂದ್ಯ ರೋಚಕವಾಗಿ ಮುಕ್ತಾಯ ಕಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications