ಟೀಮ್ ಇಂಡಿಯಾದ ಯಶಸ್ವಿ ನಾಯಕರಲ್ಲಿ ಕಾಣಿಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಅವರ ಸಾಧನೆಗೆ ಐಸಿಸಿ ಗೌರವ ಸೂಚಿಸಿದೆ. ಭಾರತ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನೀಡಿದ ಅನುಪಮ ಸೇವೆಗಾಗಿ ಎಂಎಸ್ ಧೋನಿ ಅವರಿಗೆ ಐಸಿಸಿ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಸಕ್ತ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೂ ಎರಡು ದಿನಗಳ ಮುನ್ನ ಸುಂದರ ಕಾರ್ಯಕ್ರಮದಲ್ಲಿ, ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್‌ಡಿ ಸೇರಿದಂತೆ ಏಳು ಖ್ಯಾತ ನಾಮ ಆಟಗಾರರಿಗೆ ಐಸಿಸಿ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಐದು ವರ್ಷದ ಬಳಿಕ ಟೀಮ್ ಇಂಡಿಯಾ ಮಾಜಿ ನಾಯಕನಿಗೆ ಈ ಗೌರವ ಸಂದಿದೆ. ಹಾಲ್ ಆಫ್ ಫೇಮ್ ಪ್ರಶಸ್ತಿಗೆ ಭಾಜನವಾದ ಭಾರತದ ಐದನೇ ಆಟಗಾರ ಎಂಬ ಖ್ಯಾತಿ ಧೋನಿ ಅವರದ್ದಾಗಿದೆ. ಧೋನಿ ಅವರು ಆಗಸ್ಟ್ 15, 2020 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದರು. ಭಾರತದ ದಿಗ್ಗಜ ಆಟಗಾರನೊಂದಿಗೆ ಮ್ಯಾಥ್ಯೂ ಹೇಡನ್, ಗ್ರೇಮ್ ಸ್ಮಿತ್, ಡೇನಿಯಲ್ ವೆಟ್ಟೋರಿ ಮತ್ತು ಹಾಶಿಮ್ ಆಮ್ಲಾ ಅವರನ್ನು ಸಹ ಹಾಲ್ ಆಫ್ ಫೇಮ್ ನೀಡಿ ಗೌರವಿಸಲಾಗಿದೆ.

ಮಹೇಂದ್ರ ಸಿಂಗ್ ಧೋನಿ ಅವರನ್ನು ಟೀಮ್ ಇಂಡಿಯಾದ ಯಶಸ್ವಿ ನಾಯಕರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಇವರ ನಾಯಕತ್ವದಲ್ಲಿ ಭಾರತ ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದಿತ್ತು. ಧೋನಿ ನಾಯಕತ್ವದಲ್ಲಿ ಭಾರತ 2007ರ ಟಿ20 ವಿಶ್ವಕಪ್, 2011 ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿಗಳು ಸೇರಿವೆ. ಟೀಮ್ ಇಂಡಿಯಾದ ಪರ ಮಹೇಂದ್ರ ಸಿಂಗ್ ಧೋನಿ ಹಲವು ಸ್ಮರಣೀಯ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಧೋನಿ 2004ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.
ಧೋನಿ ತಂಡಕ್ಕೆ ಪದಾರ್ಪಣೆ ಮಾಡಿದ ಮೂರೇ ವರ್ಷದಲ್ಲಿ ತಂಡದ ನಾಯಕತ್ವವನ್ನು ಪಡೆದರು. ಇಲ್ಲಿಯವರೆಗೆ ಎಂಎಸ್ ಧೋನಿ, ನೀತು ಡೇವಿಡ್, ಡಯಾನಾ ಎಡುಲ್ಜಿ, ಸಚಿನ್ ತೆಂಡೂಲ್ಕರ್, ವಿನೂ ಮಂಕಡ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಕಪಿಲ್ ದೇವ್, ಬಿಷನ್ ಸಿಂಗ್ ಬೇಡಿ ಮತ್ತು ಸುನಿಲ್ ಗವಾಸ್ಕರ್ ಅವರಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ಸಂದಿದೆ. ಮಹೇಂದ್ರ ಸಿಂಗ್ ಧೋನಿ ಸದ್ಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮಾತ್ರ ಆಡುತ್ತಿದ್ದಾರೆ. ಐಪಿಎಲ್‌ಗೆ ಇನ್ನು ಇವರು ನಿವೃತ್ತಿಯನ್ನು ಘೋಷಿಸಿಲ್ಲ.

ಧೋನಿ ವಿಶ್ವದ ಖ್ಯಾತ ವಿಕೆಟ್ ಕೀಪರ್ ಅಷ್ಟೇ ಅಲ್ಲಾ, ಒಬ್ಬ ನುರಿತ ಬ್ಯಾಟರ್ ಕೂಡ ಹೌದು. ಇವರು 144 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು 38ರ ಸರಾಸರಿಯಲ್ಲಿ 4876 ರನ್ ಸಿಡಿಸಿದ್ದಾರೆ. ಈ ವೇಳೆ 6 ಶತಕ ಹಾಗೂ 33 ಅರ್ಧಶತಕಗಳು ಸೇರಿವೆ. ಇನ್ನು 350 ಏಕದಿನ ಪಂದ್ಯಗಳಲ್ಲಿ ಧೋನಿ 10773 ರನ್ ಬಾರಿಸಿದ್ದಾರೆ. ಇದರಲ್ಲಿ 10 ಶತಕ, 73 ಅರ್ಧಶತಗಳು ಒಳಗೊಂಡಿವೆ. 98 ಟಿ20 ಪಂದ್ಯಗಳಲ್ಲಿ ಭಾರತದ ಪರ ಆಡಿರುವ ಮಾಹಿ 1617 ರನ್ ಕಲೆ ಹಾಕಿದ್ದಾರೆ.